ದಿನಕರನ್ ವಿರುದ್ಧ ‘ಲುಕ್‌ಔಟ್’ ನೋಟಿಸ್
ಹೊಸದಿಲ್ಲಿ, ಎ.19: ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚದ ಆಮಿಷವೊಡ್ಡಿದ ಆರೋಪ ಎದುರಿಸುತ್ತಿರುವ ಎಐಎಡಿಎಂಕೆ ಮುಖಂಡ ಟಿಟಿವಿ ದಿನಕರನ್ ಅವರ ವಿರುದ್ಧ ದಿಲ್ಲಿ ಪೊಲೀಸರು ‘ಲುಕ್‌ಔಟ್’ ನೋಟಿಸ್ ಜಾರಿಗೊಳಿಸಿದ್ದಾರೆ.
ದಿನಕರನ್ ಅನಿವಾಸಿ ಭಾರತೀಯನಾಗಿರುವ ಕಾರಣ ತಲೆತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ವಲಸೆ ಅಧಿಕಾರಿಗಳನ್ನು ಜಾಗರೂಕಗೊಳಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಪ್ರವೀರ್ ರಾಜನ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂಬ್ರಾಂಚ್ ಪೊಲೀಸರು ಈಗಾಗಲೇ ಮಧ್ಯವರ್ತಿ ಎನ್ನಲಾಗಿರುವ ಸುಕೇಶ್ ಚಂದ್ರಶೇಖರ್ ಎಂಬಾತನನ್ನು ಬಂಧಿಸಿದ್ದಾರೆ.
ತನಗೆ ಚುನಾವಣಾ ಆಯೋಗದ ಅಧಿಕಾರಿಗಳ ನಿಕಟ ಸಂಪರ್ಕವಿದ್ದು ಎಐಎಡಿಎಂಕೆ ಪಕ್ಷದ ಚಿಹ್ನೆಯಾದ ಎರಡೆಲೆಯನ್ನು ಆರ್.ಕೆ.ನಗರ ಉಪಚುನಾವಣೆಯಲ್ಲಿ ಶಶಿಕಲಾ ಬಣಕ್ಕೆ ದೊರಕಿಸಿಕೊಡುವುದಾಗಿ ದಿನಕರನ್‌ಗೆ ಸುಕೇಶ್ ತಿಳಿಸಿದ್ದ. ಇದರಂತೆ 50 ಕೋಟಿ ರೂ.ಗೆ ಡೀಲ್ ಕುದುರಿದ್ದು ಮುಂಗಡವಾಗಿ 10 ಕೋಟಿ ಪಡೆದಿದ್ದ ಎನ್ನಲಾಗಿದೆ. ಚಾಂದಿನಿ ಚೌಕದಲ್ಲಿರುವ ಓರ್ವ ವ್ಯಕ್ತಿಯಿಂದ ಹವಾಲಾ ಜಾಲದ ಮೂಲಕ ಸುಕೇಶ್ ಹಣ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.