ಕಾರ್ಗಿಲ್ ಕಾರ್ಯಾಚರಣೆಯ ಕೀರ್ತಿ ಯೋಧರಿಗೆ ಸಲ್ಲಬೇಕು: ನಿವೃತ್ತ ಜನರಲ್ ವೇದಪ್ರಕಾಶ್
ಮಂಗಳೂರು, ಎ.19: ಕಾರ್ಗಿಲ್ ಕಾರ್ಯಾಚರಣೆಯ ಜಯ ಹಾಗೂ ಸರ್ಜಿಕಲ್ ಸ್ಟ್ರೈಕ್‌ನ ಯಶಸ್ವಿ ಕಾರ್ಯಾಚರಣೆಯ ಕೀರ್ತಿ ಸೇನೆಯ ತಳ ಮಟ್ಟದಲ್ಲಿದ್ದು, ಪ್ರತಿಕೂಲ ಪರಿಸರದಲ್ಲಿ ಪ್ರಾಣದ ಹಂಗು ತೊರೆದು ಹೋರಾಡಿದ ಯೋಧರಿಗೆ ಸಲ್ಲಬೇಕು. ಇದರಲ್ಲಿ ರಾಜಕೀಯ ಸಲ್ಲದು ಎಂದು 1999ರಲ್ಲಿ ಕಾರ್ಗಿಲ್ ಆಪರೇಶನ್ ವಿಜಯದ ನೇತೃತ್ವ ವಹಿಸಿದ್ದ ಜನರಲ್ ವೇದಪ್ರಕಾಶ್ ಮಲಿಕ್ ತಿಳಿಸಿದ್ದಾರೆ
ನಗರದ ಪುರಭವನದಲ್ಲಿಂದು ಜಿಲ್ಲಾ ಮಾಜಿ ಸೈನಿಕರ ಸಂಘ, ಶಾಸ್ತವು ಭೂತನಾಥೇಶ್ವರ ಟ್ರಸ್ಟ್, ಲಯನ್ಸ್ ಜಿಲ್ಲೆ ಮಂಗಳೂರು ಇದರ ವತಿಯಿಂದ ಹಮ್ಮಿಕೊಂಡ ಕಾರ್ಗಿಲ್ 1999ರ "ಆಪರೇಶನ್ ವಿಜಯ್ ಕಾರ್ಯಾಚರಣೆ"ಯ ಬಗ್ಗೆ ಸಾರ್ವಜನಿಕರೊಂದಿಗೆ ಸಂವಾದ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ರಾಷ್ಟ್ರದ ಸುರಕ್ಷತೆ ಎನ್ನುವುದು ಎಲ್ಲಾ ಕಾಲದಲ್ಲೂ ಸ್ಥಿರವಾಗಿರುವ ಸಂಗತಿಯಲ್ಲ ಎನ್ನುವುದು ಕಾರ್ಗಿಲ್ ಯುದ್ಧದಿಂದ ನಾವು ಕಲಿಯಬೇಕಾದ ಪಾಠವಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಲಾಹೋರ್ ಒಪ್ಪಂದವಾದ ಬಳಿಕ ನಾಲ್ಕೇ ತಿಂಗಳಲ್ಲಿ ಪಾಕಿಸ್ತಾನ ಭಾರತದ ಗಡಿಯಲ್ಲಿ ಆಕ್ರಮಣ ನಡೆಸಿದೆ. ಪ್ರಸಕ್ತ ಕಾಶ್ಮೀರದ ಪರಿಸ್ಥಿತಿಯೂ ಶಾಂತಿಯುತವಾಗಿಲ್ಲ. ಯಾವುದೇ ಸಂದರ್ಭದಲ್ಲಿ ದೇಶದ ರಕ್ಷಣೆಗೆ ಅಪಾಯ ಉಂಟಾಗುವ ವಾತಾವರಣ ನಿರ್ಮಾಣವಾಗಬಹುದು. ಈ ನಿಟ್ಟಿನಲ್ಲಿ ಭಾರತ ಸದಾ ಸನ್ನದ್ಧ ಸ್ಥಿತಿಯಲ್ಲಿ ಇರಬೇಕಾಗಿದೆ. ಕಾರ್ಗಿಲ್ ಸಂದರ್ಭದಲ್ಲೂ ಭಾರತದ ಸೇನೆ ಪಾಕಿಸ್ತಾನಿ ಸೇನೆಯನ್ನು ಹಿಮ್ಮೆಟ್ಟಿಸುವ ಸನ್ನದ್ಧ ಸ್ಥಿತಿಯಲ್ಲಿದ್ದ ಕಾರಣ ಕಾರ್ಗಿಲ್ ಕಾರ್ಯಾಚರಣೆ ಯಲ್ಲಿ ಜಯ ಗಳಿಸಲು ಸಾಧ್ಯವಾಯಿತು. ಆದರೆ ಈ ಸಂದರ್ಭದಲ್ಲಿ ದೇಶದೊಳಗಿನ ಕೆಲವು ಉಗ್ರ ಸಂಘಟನೆಗಳು ಸೇನೆಯ ವಿರುದ್ಧ ಹೋರಾಟದಲ್ಲಿ ತೊಡಗಿರುವುದು ಆರಂಭದಲ್ಲಿ ಗೊತ್ತಾಗಲಿಲ್ಲ. ಬಳಿಕ ಪಾಕಿಸ್ತಾನಿ ಸೈನಿಕರು ದೇಶದ ಗಡಿಯೊಳಗೆ ನುಗ್ಗಿರುವುದು ಸ್ಪಷ್ಟವಾಯಿತು. ಈ ಕಾರಣದಿಂದ ಕಾರ್ಯಾಚರಣೆ ಸ್ವಲ್ಪ ವಿಳಂಬವಾಯಿತು ಎಂದು ವೇದಪ್ರಕಾಶ್ ತಿಳಿಸಿದರು.
"ನಾವು ಯುದ್ಧದ ಸಂದರ್ಭದಲ್ಲಿ ಸೈನಿಕರ ಮನೋಸ್ಥೈರ್ಯ ಕುಸಿಯದಂತೆ ಅವರನ್ನು ಪ್ರೋತ್ಸಾಹಿಸುತ್ತಿದ್ದೆವು. ಜೀವದ ಹಂಗು ತೊರೆದು ಯುವ ಯೋಧರು ಈ ಜಯವನ್ನು ತಂದು ಕೊಟ್ಟಿದ್ದಾರೆ. ಕೆಲವರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಸೆರೆ ಸಿಕ್ಕ ಭಾರತದ ಕೈದಿಗಳ ಮೇಲೆ ಪಾಕ್ ಸೇನೆ ಬರ್ಬರ ದೌರ್ಜನ್ಯ ನಡೆಸಿತು. ಈ ಬಗ್ಗೆ ಭಾರತ ಸರಕಾರಕ್ಕೆ ನಾನು ದೂರು ನೀಡಿದ್ದೇನೆ" ಎಂದು ವೇದ ಪ್ರಕಾಶ್ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಸರ್ಜಿಕಲ್ ಸ್ಟ್ಟ್ರೆಕ್‌ನ ಬಗ್ಗೆ ಉತ್ತರಿಸಿದ ಅವರು, ಅದರ ಅಗತ್ಯವಿತ್ತು ಸೈನಿಕರು ಅದನ್ನು ದೇಶದ ರಕ್ಷಣೆಯ ದೃಷ್ಟಿಯಿಂದ ಸಮರ್ಥವಾಗಿ ನಿಭಾಯಿಸಿದ್ದಾರೆ. ಮುಂದೆಯೂ ಅಗತ್ಯ ಕಂಡರೆ ನಡೆಸಬೇಕಾದೀತು. ಇದರಲ್ಲಿ ಪಕ್ಷ ರಾಜಕಾರಣ ಸಲ್ಲದು ಎಂದು ಹೇಳಿದರು.
ಜಿಲ್ಲಾ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ವಿಕ್ರಂ ದತ್ತ ಅಧ್ಯಕ್ಷತೆ ವಹಿಸಿದ್ದರು. ಕರ್ನಲ್ ಶರತ್ ಭಂಡಾರಿ ಸ್ವಾಗತಿಸಿದರು. ಬ್ರಿಗೇಡಿಯರ್ ಐ.ಎನ್.ರೈ ಅತಿಥಿಗಳನ್ನು ಪರಿಚಯಿಸಿದರು.
ಜಿಲ್ಲಾಧಿಕಾರಿ ಡಾ.ಜಗದೀಶ್, ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆ, ಶಾಸ್ತಾವು ಭೂತನಾಥೇಶ್ವರಿ ಟ್ರಸ್ಟ್ ನ ಆಡಳಿತ ಟ್ರಸ್ಟಿ ವಿಜಯನಾಥ ವಿಠಲ ಶೆಟ್ಟಿ, ಲಯನ್ಸ್ ಮುಖಂಡ ಅರುಣ್ ಶೆಟ್ಟಿ, ಕರ್ನಲ್ ಬಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.