×
Ad

ಘೋಷಣೆ, ಧ್ವಜ ಪ್ರದರ್ಶನವೇ ರಾಷ್ಟ್ರೀಯತೆಯ ಪರೀಕ್ಷೆಯಾಗಿದೆ: ದಿಲ್ಲಿ ನಿವೃತ್ತ ನ್ಯಾಯಮೂರ್ತಿ ಲೇವಡಿ

Update: 2017-04-20 09:14 IST

ಹೊಸದಿಲ್ಲಿ, ಎ.20: ಪ್ರಸಕ್ತ ರಾಜಕೀಯ ಚಿತ್ರಣವನ್ನು ಕಟುವಾಗಿ ಟೀಕಿಸಿರುವ ದಿಲ್ಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ.ಶಾ ಅವರು, ರಾಷ್ಟ್ರಗೀತೆಗಾಗಿ ಎದ್ದುನಿಲ್ಲುವಂತೆ ಭಾರತೀಯರಿಗೆ ಒತ್ತಡ ಹಾಕಲಾಗುತ್ತಿದೆ. ನೀವು ಏನು ತಿನ್ನಬೇಕು, ನೋಡಬೇಕು ಅಥವಾ ಮಾತನಾಡಬೇಕು ಹಾಗೂ ಯಾವುದನ್ನು ತಿನ್ನಬಾರದು, ನೋಡಬಾರದು ಹಾಗೂ ಮಾತನಾಡಬಾರದು ಎನ್ನುವುದನ್ನೂ ಸೂಚಿಸುವ ಪರಿಸ್ಥಿತಿ ಇದೆ. ದೇಶದ ವಿಶ್ವವಿದ್ಯಾನಿಲಯಗಳಲ್ಲಿನ ಭಿನ್ನ ಅಭಿಪ್ರಾಯಗಳನ್ನು ಮೊಟಕುಗೊಳಿಸಲಾಗುತ್ತಿದೆ. ಘೋಷಣೆ ಕೂಗುವುದು ಹಾಗೂ ಧ್ವಜವನ್ನು ಪ್ರದರ್ಶಿಸುವುದೇ ರಾಷ್ಟ್ರೀಯತೆಯ ಪರೀಕ್ಷೆ ಎಂಬ ವಾತಾವರಣ ನಿರ್ಮಾಣವಾಗಿದೆ ಎಂದು ಲೇವಡಿ ಮಾಡಿದ್ದಾರೆ.

ಎಂ.ಎನ್.ರಾಯ್ ಸ್ಮಾರಕ ಉಪನ್ಯಾಸ ನೀಡಿದ ಅವರು, ಗುರ್‌ಮೆಹರ್ ಕೌರ್ ತಮ್ಮ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಆನ್‌ಲೈನ್‌ನಲ್ಲಿ ನಿಂದನೆ ಎದುರಿಸಬೇಕಾಗಿ ಬಂದ ಪರಿಸ್ಥಿತಿಯನ್ನೂ ಪ್ರಸ್ತಾಪಿಸಿದರು. ಆದರೆ ಆಕೆಯ ಹೆಸರನ್ನು ಎಲ್ಲೂ ಉಲ್ಲೇಖಿಸಲಿಲ್ಲ.

ದೇಶದ ಕಲಿಕಾ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ. ಯಾವುದೇ ಸ್ವತಂತ್ರ್ಯ ಯೋಚನೆಯನ್ನು ಧ್ವಂಸಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆಕ್ಷೇಪಿಸಿದರು. ಸರಕಾರದ ಸ್ವೀಕಾರಾರ್ಹ ಅಭಿಪ್ರಾಯಕ್ಕಿಂತ ಭಿನ್ನವಾಗಿ ಯಾವ ಅಭಿಪ್ರಾಯಗಳು ವ್ಯಕ್ತವಾದರೂ, ಅವರನ್ನು ದೇಶದ್ರೋಹಿಗಳು ಎಂದು ನಿಂದಿಸಲಾಗುತ್ತದೆ ಎಂದು ಶಾ ಖೇದ ವ್ಯಕ್ತಪಡಿಸಿದರು.

ಇದು ಭಿನ್ನ ಅಭಿಪ್ರಾಯಗಳನ್ನು ಹಾಗೂ ಟೀಕೆಗಳ ಸದ್ದಡಗಿಸುವ ಹುನ್ನಾರ. ಇದಕ್ಕಿಂತಲೂ ಹೆಚ್ಚಾಗಿ ಅವರ ವಿರುದ್ಧ ದೇಶದ್ರೋಹದಂಥ ಕಾನೂನನ್ನು ಹೇರುತ್ತಿರುವುದು ತಪ್ಪು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News