ಬೇಡಿಕೆ ಈಡೇರಿಸಲು ಆಗ್ರಹಿಸಿ ರೈಲ್ವೆ ನೌಕರರ ಧರಣಿ
ಮಂಗಳೂರು, ಎ.20: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ದಕ್ಷಿಣ ರೈಲ್ವೆ ಎಂಪ್ಲಾಯರ್ಸ್ ಯೂನಿಯನ್ (ಡಿಆರ್‌ಇಯು)ಗುರುವಾರ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಮುಂದೆ ಧರಣಿ ನಡೆಸಿತು.
ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಗುಮಾಸ್ತ ಹುದ್ದೆಗಳನ್ನು ತೆರವುಗೊಳಿಸಬೇಕು, ರೈಲ್ವೆ ಕಾಲನಿಯ ನಿವಾಸಿಗಳಿಗೆ ಭದ್ರತೆ ನೀಡಬೇಕು, ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮಹಿಳೆಯ ಆಸ್ಪತ್ರೆಯ ವೆಚ್ಚವನ್ನು ಇಲಾಖೆ ಭರಿಸಬೇಕು, ರೈಲು ನಿಲ್ದಾಣದಲ್ಲಿ ಭಿಕ್ಷುಕರ ಹಾವಳಿಗೆ ತಡೆ ಹಾಕಬೇಕು, ಕಳ್ಳರ ಉಪಟಳವನ್ನು ಕೊನೆಗೊಳಿಸಬೇಕು, ಸಕಾಲಕ್ಕೆ ಮನಪಾ ನೀರು ಪೂರೈಕೆ ಮಾಡಬೇಕು, ಕಾಲನಿಯ 7 ಬಾವಿಗಳಿಗೆ ಕಲುಷಿತ ನೀರು ಹರಿಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ದಕ್ಷಿಣ ರೈಲ್ವೆ ಎಂಪ್ಲಾಯರ್ಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಮ್ಯಾಥುವ್ ಸಿರಿಯಾಕ್, ಸಿಪಿಎಂ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಡಿಆರ್‌ಇಯು ಸಂಘಟನೆಯ ಮುಖಂಡರಾದ ಪ್ರಕಾಶ್, ಲಕ್ಷ್ಮಣ್, ಭರತ್‌ಲಾಲ್, ತ್ರಿವಿಕ್ರಮನ್ ಮತ್ತಿತರರು ಪಾಲ್ಗೊಂಡಿದ್ದರು.