‘ನಿಮಗೆ ಜವಾಬ್ದಾರಿಯ ಪ್ರಜ್ಞೆಯೇ ಇಲ್ಲ’: ಶ್ರೀ ರವಿಶಂಕರ್‌ಗೆ ಎನ್‌ಜಿಟಿ ಛೀಮಾರಿ

Update: 2017-04-20 09:28 GMT

ಹೊಸದಿಲ್ಲಿ,ಎ.20: ಆಧ್ಯಾತ್ಮಿಕ ಗುರು ಶ್ರೀಶ್ರೀ ರವಿಶಂಕರ್ ಅವರನ್ನು ಗುರುವಾರ ತೀವ್ರ ತರಾಟೆಗೆತ್ತಿಕೊಂಡ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ)ವು, ನಿಮಗೆ ಜವಾಬ್ದಾರಿಯ ಪ್ರಜ್ಞೆಯೇ ಇಲ್ಲ. ನಿಮಗೆ ಏನು ಬೇಕಾದರೂ ಹೇಳುವ ಸ್ವಾತಂತ್ರ ವಿದೆಯೆಂದು ಭಾವಿಸಿದ್ದೀರಾ ಎಂದು ಪ್ರಶ್ನಿಸಿತು.

 ಕಳೆದ ವರ್ಷ ದಿಲ್ಲಿಯಲ್ಲಿ ತಾನು ಏರ್ಪಡಿಸಿದ್ದ ಮೂರು ದಿನಗಳ ಬೃಹತ್ ಸಾಂಸ್ಕೃತಿಕ ಉತ್ಸವದಿಂದಾಗಿ ಪರಿಸರಕ್ಕೆ ಯಾವುದೇ ಹಾನಿಯುಂಟಾಗಿದ್ದರೆ ಮತ್ತು ಅದಕ್ಕಾಗಿ ದಂಡ ವಿಧಿಸುವುದಿದ್ದರೆ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದ ಕೇಂದ್ರ ಮತ್ತು ರಾಜ್ಯ ಸರಕಾಗಳು ಮತ್ತು ಎನ್‌ಜಿಟಿಗೆ ವಿಧಿಸಬೇಕು ಎಂದು ರವಿಶಂಕರ್ ಬುಧವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದರು.

ಎನ್‌ಜಿಟಿಯ ತರಾಟೆಯ ಬಿಸಿ ತಾಗಿರುವ ರವಿಶಂಕರರ ವಕ್ತಾರರು, ನಾವು ಆ ರೀತಿಯಲಿ ಹೇಳಿರಲಿಲ್ಲ ಎಂದರು. ನ್ಯಾಯಾಲಯದ ನಿಜವಾದ ಅಭಿಪ್ರಾಯವು ಅದರ ಅಂತಿಮ ಆದೇಶದಲ್ಲಿರಲಿದೆ ಎಂದರು. ಪ್ರಕರಣದ ಮುಂದಿನ ವಿಚಾರಣೆ ಮೇ 7ರಂದು ನಡೆಯಲಿದೆ.

  ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಏರ್ಪಡಿಸಿದ್ದ ವಿಶ್ವ ಸಾಂಸ್ಕ್ರತಿಕ ಉತ್ಸವದಿಂದಾಗಿ ಯಮುನಾ ನದಿ ಪಾತ್ರವು ಸಂಪೂರ್ಣವಾಗಿ ನಾಶಗೊಂಡಿದೆ ಮತ್ತು ಈ ಹಾನಿಯನ್ನು ಸರಿಪಡಿಸಲು ಕನಿಷ್ಠ 10 ವರ್ಷಗಳ ಅವಧಿ ಮತ್ತು ಸುಮಾರು 42 ಕೋ.ರೂ.ಗಳ ಅಗತ್ಯವಿದೆ ಎಂದು ತಜ್ಞರ ತಂಡವೊಂದು ಎನ್‌ಜಿಟಿಗೆ ವರದಿ ಸಲ್ಲಿಸಿತ್ತು.

ಯಮುನಾ ನದಿಯ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹಾನಿಯನ್ನುಂಟು ಮಾಡಿರುವ ಎಲ್ಲ ಆರೋಪಗಳನ್ನು ರವಿಶಂಕರ್ ಮತ್ತು ಆರ್ಟ್ ಆಫ್ ಲಿವಿಂಗ್ ನಿರಾಕರಿಸಿವೆ.

 ಯಮುನಾ ನದಿ ತೀರದಲ್ಲಿ ಏಳು ಎಕರೆ ವಿಶಾಲ ವೇದಿಕೆಯನ್ನೊಳಗೊಂಡಂತೆ 1,000 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ನಡೆದಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News