ಜ್ಯುವೆಲ್ಲರಿಯ ಗೋಡೆಗೆ ಕನ್ನ ಕೊರೆದು ಒಂದು ಕಿಲೋ ಚಿನ್ನ, ನಗದು ದರೋಡೆ
Update: 2017-04-20 19:51 IST
ಕಾಸರಗೋಡು, ಎ.20: ಜ್ಯುವೆಲ್ಲರಿಯ ಗೋಡೆಗೆ ಕನ್ನ ಕೊರೆದು ಚಿನ್ನಾಭರಣ ಮತ್ತು ನಗದು ದರೋಡೆಗೈದ ಘಟನೆ ಬಂದಡ್ಕದಲ್ಲಿ ನಡೆದಿದೆ.
ಬಂದಡ್ಕದ ಅಶೋಕ್ ಮಾಲಕತ್ವದ ಸುಮಂಗಲಿ ಜ್ಯುವೆಲ್ಲರಿಯ ಗೋಡೆಗೆ ಕನ್ನ ಕೊರೆದ ಕಳ್ಳರು, ಒಂದು ಕಿಲೋ ಚಿನ್ನ, ನಾಲ್ಕೂವರೆ ಕಿಲೋ ಬೆಳ್ಳಿ ಹಾಗೂ ನಗದನ್ನು ದೋಚಿದ್ದಾರೆ. ಜ್ಯುವೆಲ್ಲರಿಯ ಶಟರ್ ತೆಗೆದಾಗ ಹಿಂಬದಿಯ ಗೋಡೆ ಕೊರೆದ ಸ್ಥಿತಿಯಲ್ಲಿ ಕಂಡುಬಂದಿದ್ದು, ಚಿನ್ನಾಭರಣದ ಲಾಕರ್ ಒಡೆಯಲಾಗಿತ್ತು. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ತಲುಪಿ ಪರಿಶೀಲನೆ ನಡೆಸಿವೆ.
ಅಶೋಕ್ ರ ಸುಮಂಗಲಿ ಜ್ಯುವೆಲ್ಲರಿಯಲ್ಲಿ 7 ತಿಂಗಳ ಮೊದಲೂ ಗೋಡೆ ಕೊರೆದು ದರೋಡೆ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದರೂ ಪ್ರಮುಖ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.