ಆಸ್ಟ್ರೇಲಿಯ ಪೌರತ್ವಕ್ಕೂ ಕಠಿಣ ನಿರ್ಬಂಧ

Update: 2017-04-20 14:34 GMT

ಮೆಲ್ಬರ್ನ್, ಎ. 20: ವಿದೇಶಿ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ ‘457 ವೀಸಾ’ ಕಾರ್ಯಕ್ರಮವನ್ನು ನಿಲ್ಲಿಸಿದ ಬೆನ್ನಿಗೇ, ಆಸ್ಟ್ರೇಲಿಯದ ಪ್ರಧಾನಿ ಮಾಲ್ಕಮ್ ಟರ್ನ್‌ಬುಲ್ ಗುರುವಾರ ಪೌರತ್ವ ಕಾನೂನುಗಳನ್ನು ಬಿಗಿಗೊಳಿಸಿದ್ದಾರೆ.

ನೂತನ ಸುಧಾರಣೆಗಳ ಪ್ರಕಾರ, ಆಸ್ಟ್ರೇಲಿಯದ ಪೌರತ್ವ ಪಡೆಯಬಯಸುವವರು ಕನಿಷ್ಠ ನಾಲ್ಕು ವರ್ಷ ಆಸ್ಟ್ರೇಲಿಯದ ಖಾಯಂ ನಿವಾಸಿಗಳಾಗಿರಬೇಕು ಹಾಗೂ ‘ಆಸ್ಟ್ರೇಲಿಯನ್ ವೌಲ್ಯ’ಗಳನ್ನು ಅಳವಡಿಸಿಕೊಳ್ಳುವುದಕ್ಕೆ ಬದ್ಧವಾಗಿರಬೇಕು. ಈಗಿನ ಕಾನೂನಿನ ಪ್ರಕಾರ, ಪೌರತ್ವ ಪಡೆಯಲು ಒಂದು ವರ್ಷ ಖಾಯಂ ನಿವಾಸಿಯಾದರೆ ಸಾಕು.

ಜೊತೆಗೆ, ಪೌರತ್ವ ಬಯಸುವವರು ವಿಶೇಷ ಇಂಗ್ಲಿಷ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ಈ ಇಂಗ್ಲಿಷ್ ಪರೀಕ್ಷೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಗೌರವ ನೀಡುವುದಕ್ಕೆ ಸಂಬಂಧಿಸಿ ಹೆಚ್ಚಿನ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಬಾಲ್ಯವಿವಾಹ, ಮಹಿಳಾ ಜನನಾಂಗ ವಿಕೃತಿಗೊಳಿಸುವುದು ಮತ್ತು ಗೃಹ ಹಿಂಸೆಗೆ ಸಂಬಂಧಿಸಿದ ಪ್ರಶ್ನೆಗಳು ಇರುತ್ತವೆ ಎನ್ನಲಾಗಿದೆ.

ಆಸ್ಟ್ರೇಲಿಯದ ಸಾಮೂಹಿಕ ವೌಲ್ಯಗಳು ಮತ್ತು ಜವಾಬ್ದಾರಿಗಳನ್ನು ಅಭ್ಯರ್ಥಿಗಳು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಹಾಗೂ ಅವುಗಳಿಗೆ ಎಷ್ಟು ಬದ್ಧತೆ ಹೊಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಪ್ರಶ್ನೆಗಳೂ ಇರುತ್ತವೆ ಎಂದು ಟರ್ನ್‌ಬುಲ್ ನುಡಿದರು.

ಪೌರತ್ವ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಓರ್ವ ಅಭ್ಯರ್ಥಿಗೆ ನೀಡಲಾಗುವ ಅವಕಾಶವನ್ನು 3ಕ್ಕೆ ಸೀಮಿತಗೊಳಿಸಲಾಗಿದೆ. ಪ್ರಸಕ್ತ ಕಾನೂನಿನಲ್ಲಿ ಅಂಥ ಯಾವುದೇ ನಿರ್ಬಂಧಗಳಿಲ್ಲ.

ಅದೇ ವೇಳೆ, ಪೌರತ್ವ ಪರೀಕ್ಷೆಯಲ್ಲಿ ವಂಚನೆಗೈಯುವ ಅಭ್ಯರ್ಥಿಗಳು ತನ್ನಿಂತಾನೆ ಅನುತ್ತೀರ್ಣಗೊಳ್ಳುವ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ.
ಆಸ್ಟ್ರೇಲಿಯದ ವೌಲ್ಯಗಳನ್ನು ಬೆಂಬಲಿಸುವವರಿಗೆ, ದೇಶದ ಕಾನೂನುಗಳನ್ನು ಗೌರವಿಸುವವರಿಗೆ ಹಾಗೂ ‘ಎಲ್ಲರೊಂದಿಗೆ ಬೆರೆತು ಕಠಿಣ ಪರಿಶ್ರಮ ಪಡುವ ಹಾಗೂ ಆ ಮೂಲಕ ದೇಶದ ಅಭಿವೃದ್ಧಿಗೆ ದೇಣಿಗೆ ನೀಡುವವರಿಗೆ’ ಮಾತ್ರ ಪೌರತ್ವವನ್ನು ನೀಡಲಾಗುತ್ತದೆ ಎಂದು ಪ್ರಧಾನಿ ಘೋಷಿಸಿದರು.

ನ್ಯೂಝಿಲ್ಯಾಂಡ್ ಉದ್ಯೋಗಗಳು ಪ್ರಜೆಗಳಿಗೇನೂತನ ವಲಸೆ ನೀತಿ ಘೋಷಣೆ

ಅಮೆರಿಕ ಮತ್ತು ಆಸ್ಟ್ರೇಲಿಯಗಳ ದಾರಿಯನ್ನೇ ಅನುಸರಿಸಿರುವ ನ್ಯೂಝಿಲ್ಯಾಂಡ್, ತನ್ನ ಪ್ರಜೆಗಳಿಗೆ ಆದ್ಯತೆ ನೀಡುವ ವಲಸೆ ನೀತಿಯನ್ನು ಜಾರಿಗೆ ತರುವ ಇಂಗಿತವನ್ನು ವ್ಯಕ್ತಪಡಿಸಿದೆ.

 ‘‘ಸರಿಯಾದ ಸಮತೋಲನವನ್ನು ತರುವುದಕ್ಕಾಗಿ ವಲಸೆ ನೀತಿಯಲ್ಲಿ ಬದಲಾವಣೆಗಳನ್ನು ತರಲಾಗುತ್ತಿದೆ. ನ್ಯೂಝಿಲ್ಯಾಂಡ್ ಪ್ರಜೆಗಳನ್ನೇ ಹೆಚ್ಚಾಗಿ ಕೆಲಸಕ್ಕೆ ತೆಗೆದುಕೊಳ್ಳುವಂತೆ ಹಾಗೂ ಅವರ ಕೌಶಲ ವೃದ್ಧಿಗೆ ಹೆಚ್ಚಿನ ಹೂಡಿಕೆಯನ್ನು ಮಾಡುವಂತೆ ಉದ್ಯೋಗದಾತರನ್ನು ಬೆಂಬಲಿಸಲಾಗುತ್ತದೆ’’ ಎಂದು ದೇಶದ ವಲಸೆ ಸಚಿವ ಮೈಕಲ್ ವುಡ್‌ಹೌಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ನ್ಯೂಝಿಲ್ಯಾಂಡ್‌ನಲ್ಲಿ ಈ ವರ್ಷದ ಸೆಪ್ಟಂಬರ್ 23ರಂದು ಸಂಸದೀಯ ಚುನಾವಣೆ ನಡೆಯಲಿದ್ದು, ವಲಸೆಯು ಪ್ರಮುಖ ಚುನಾವಣಾ ವಿಷಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News