×
Ad

ಇಂತಹ ಬಾಯ್ ಫ್ರೆಂಡ್ ಯಾರಿಗೂ ಇರಬಾರದು !

Update: 2017-04-20 20:20 IST

ಹೈದರಾಬಾದ್ , ಎ. 20 : ನಿಮ್ಮ ಗರ್ಲ್ ಫ್ರೆಂಡ್ ಗೆ ಒಂದು ಕಹಿ ಸತ್ಯ ಹೇಳುವುದನ್ನು ತಪ್ಪಿಸಲು ನೀವು ಯಾವ ಹಂತಕ್ಕೆ ಹೋಗಬಲ್ಲಿರಿ ? ಇಲ್ಲೊಬ್ಬ ಭೂಪ ಇದಕ್ಕಾಗಿ ಒಂದಲ್ಲ, ಎರಡಲ್ಲ ಮೂರು ವಿಮಾನ ನಿಲ್ದಾಣಗಳಲ್ಲಿ ಭೀತಿಯ ವಾತಾವರಣ ಉಂಟು ಮಾಡಿದ್ದಾನೆ !

ವಂಶಿ ಕೃಷ್ಣ  (31) ಎಂಬಾತನೇ ಈ ಪ್ರಮಾದ ಮಾಡಿದವನು. ಈತ ಚೆನ್ನೈಯ  ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರು ಜೊತೆಗೆ ಮುಂಬೈ ಹಾಗು ಗೋವಾಗೆ ಪ್ರವಾಸ ಹೋಗಲು ನಿರ್ಧರಿಸಿದ್ದರು. ಆದರೆ ವಂಶಿಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಕುಂಟು ನೆಪ ಹೇಳಿ ತಪ್ಪಸಲು ಆತ ಪ್ರಯತ್ನಿಸಿದರೂ ಆಕೆ ಪ್ರವಾಸ ರದ್ದು ಮಾಡಲು ಒಪ್ಪಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ವಂಶಿ ಈ ಭಯಂಕರ ಐಡಿಯಾಗೆ ಕೈ ಹಾಕಿದ್ದಾನೆ. 

ಮೊದಲು ಎಪ್ರಿಲ್ 16 ರಂದು ಚೆನ್ನೈ ಯಿಂದ ಮುಂಬೈ ಗೆ ಪ್ರಯಾಣಿಸುವ ನಕಲಿ ಟಿಕೆಟ್ ಮಾಡಿ ಆಕೆಗೆ ಕಳಿಸಿದ್ದಾನೆ. ಬಳಿಕ ಮುಂಬೈ, ಚೆನ್ನೈ ಹಾಗು ಹೈದರಾಬಾದ್ ಪೊಲೀಸ್ ಆಯುಕ್ತರಿಗೆ ನಕಲಿ ಇಮೇಲ್ ಐಡಿ ಬಳಸಿ ಅಪಹರಣ ಪ್ರಯತ್ನ ನಡೆಯಲಿದೆ ಎಂದು ಇಮೇಲ್ ಮಾಡಿದ್ದಾನೆ. ಇದರಿಂದ ಮೂರೂ ವಿಮಾನ ನಿಲ್ದಾಣಗಳಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿತ್ತು. 

ಈ ಬೆದರಿಕೆ ಇಮೇಲ್ ಗಳು ಹೈದರಾಬಾದ್ ನಿಂದ ಹೋಗಿವೆ ಎಂದು ಮುಂಬೈ ಆಯುಕ್ತರಿಂದ ಹೈದರಾಬಾದ್ ಆಯುಕ್ತರಿಗೆ ಮಾಹಿತಿ ಬಂತು . ಅದರ ಆಧಾರದಲ್ಲಿ ತನಿಖೆ ನಡೆಸಿದಾಗ ಇಂಟರ್ನೆಟ್ ಕೆಫೆ ಒಂದರಿಂದ ಇಮೇಲ್ ಕಳಿಸಿದ ವಂಶಿ ಸಿಕ್ಕಿ ಬಿದ್ದಿದ್ದಾನೆ. ತನಿಖೆ ನಡೆಸಿದಾಗ ಈತ ಈ ಹಿಂದೆ ಮಹಿಳೆಯೊಬ್ಬಳಿಗೆ ಇಂಟರ್ನೆಟ್ ಮೂಲಕ ಮದುವೆ ಭರವಸೆ ನೀಡಿ ಆರು ಲಕ್ಷ ವಂಚಿಸಿದ್ದ ಎಂಬ ಮಾಹಿತಿಯೂ ಹೊರ ಬಂದಿದೆ. 
ಈತನ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ ಗಳಲ್ಲಿ ಪ್ರಕರಣ ದಾಖಲಾಗಿದೆ.

Photo: http://thenewsminute.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News