ಪೆರಾಬೆ: ಪತ್ನಿಯನ್ನು ಕೊಲೆ ಮಾಡಿದ ಗಂಡನ ಆರೋಪ ಸಾಬೀತು
ಪುತ್ತೂರು, ಎ.20: 3 ವರ್ಷಗಳ ಹಿಂದೆ ಪೆರಾಬೆ ಗ್ರಾಮದ ಕೊಚಕಟ್ಟೆ ಎಂಬಲ್ಲಿ ಮಹಿಳೆಯೋರ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯ ಆರೋಪಿಯ ಆರೋಪವನ್ನು ಸಾಬೀತು ಪಡಿಸಿದೆ.
ಸೆಕ್ಷನ್ 302ರಂತೆ ಕೊಲೆ, ಸೆಕ್ಷನ್ 498ರಂತೆ ದೈಹಿಕ, ಮಾನಸಿಕ, ಕಿರುಕುಳ ನೀಡಿದ ಹಾಗೂ ಸೆಕ್ಷನ್ 204ರಲ್ಲಿ ಸಾಕ್ಷ ನಾಶ ಮಾಡಿದ ಕುರಿತು ಆರೋಪ ಸಾಬೀತಾಗಿದೆ. ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿಲ್ಲ.
2014ರ ನ.10 ರ ರಾತ್ರಿ ಗಂಟೆ 9:30ಕ್ಕೆ ಘಟನೆ ನಡೆದಿದ್ದು, ಪೆರಾಬೆ ಗ್ರಾಮದ ಕೊಚಕಟ್ಟೆ ನಿವಾಸಿ ಸುರೇಶ್ ಎಂಬವರ ಪತ್ನಿ ಲಕ್ಷ್ಮೀ ಎಂಬವರು ಕೊಲೆಯಾದವರು. ಆರೋಪಿ ಸುರೇಶ್ ಮುಗೇರ 9 ವರ್ಷಗಳ ಹಿಂದೆ ಬಂಟ್ವಾಳ ಗ್ರಾಮದ ಕಾವಳಪಡೂರು ಮದ್ವ ಎಂಬಲ್ಲಿಂದ ಲಕ್ಷ್ಮಿಯವರನ್ನು ವಿವಾಹವಾಗಿದ್ದರು. ಬಳಿಕದ ದಿನಗಳಲ್ಲಿ 5 ವರ್ಷಗಳಿಂದ ಪತ್ನಿ ಲಕ್ಷ್ಮೀಗೆ ನಿರಂತರ ಮಾನಸಿಕ ಕಿರುಕುಳ, ಹಿಂಸೆ ನೀಡುತ್ತಿದ್ದು, 2014ರ ನ.10ರಂದು ರಾತ್ರಿ ಸಾಂಬಾರು ಪದಾರ್ಥ ಸರಿಯಾಗಿಲ್ಲವೆಂದು ಪತ್ನಿಯ ಜೊತೆ ತಗಾದೆ ಎತ್ತಿ ಸಿಟ್ಟುಗೊಂಡು ಮರದ ಮಣೆಯಿಂದ ಲಕ್ಷ್ಮೀಯ ಹಣೆಗೆ ಹಲ್ಲೆ ನಡೆಸಿದ್ದಾರೆ. ಗಂಡನ ಹಲ್ಲೆಯನ್ನು ತಪ್ಪಿಸಲು ಮನೆಯಿಂದ ಲಕ್ಷ್ಮೀ ಓಡಿದ್ದು, ಸ್ಥಳೀಯ ಅಣಿಯೂರು ಯಾನೆ ತನಿಯಾರು ಎಂಬವರ ಜಮೀನಿಗೆ ತಲುಪುತ್ತಿದ್ದಂತೆ ಸುರೇಶ್ ಮತ್ತೊಮ್ಮೆ ಲಕ್ಷ್ಮೀಗೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದಾಗಿ ಲಕ್ಷ್ಮೀ ಸ್ಥಳದಲ್ಲೇ ಮೃತಪಟ್ಟಿದ್ದು. ಸಾಕ್ಷವನ್ನು ನಾಶ ಮಾಡುವ ಉದ್ದೇಶದಿಂದ ಪತ್ನಿಯ ಶವವನ್ನು ಅಲ್ಲಿಯೇ ಪಕ್ಕದಲ್ಲಿದ್ದ ಬಾವಿಗೆ ಹಾಕಿದ್ದ. ಮಾರನೆ ದಿನ ಪತ್ನಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಗುಲ್ಲೆಬ್ಬಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.
ಅದೇ ದಿನ ಕಡಬ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 306ರಂತೆ ಮಾನಸಿಕ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು.
ಆತ್ಮಹತ್ಯೆ ಕೊಲೆಯಾದಾಗ:
ಲಕ್ಷ್ಮೀಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ದೇರಳಕಟ್ಟೆ ಪೊರೆನ್ಸಿಕ್ ಲ್ಯಾಬ್‌ನ ಪ್ರೊ. ಡಾ. ಸೂರಜ್ ಎಸ್.ಶೆಟ್ಟಿಯವರು ಮೃತ ಲಕ್ಷ್ಮೀಯವರ ತಲೆ ಭಾಗಕ್ಕೆ ಬಲವಾದ ಹಲ್ಲೆ ನಡೆದಿರುವ ವಿಚಾರ ಪತ್ತೆ ಹಚ್ಚಿದ್ದರು, ಘಟನೆ ನಡೆದ ಸ್ಥಳವನ್ನೂ ಪರಿಶೀಲನೆಯನ್ನು ನಡೆಸಿದರು. 2014ರ ನ.13ರಂದು ಇದೊಂದು ಆತ್ಮಹತ್ಯೆಯಲ್ಲ ಕೊಲೆ ಎಂದು ವರದಿ ನೀಡಿದ್ದರು. ಇದೇ ಆಧಾರದ ಮೇಲೆ ಸರಕಾರಿ ಅಭಿಯೋಜಕ ಉದಯ ಕುಮಾರ್ ವಾದ ಮಂಡನೆ ಮಾಡಿದ್ದರು. ಕೊಲೆ ಆರೋಪವನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯ ಆರೋಪವನ್ನು ಸಾಬೀತು ಪಡಿಸಿದೆ.