×
Ad

​ಎ.23: ಪುತ್ತೂರಿನಲ್ಲಿ ಬಂಟ್ರೆ ಗೌಜಿ-2017 ಕಾರ್ಯಕ್ರಮ

Update: 2017-04-20 21:52 IST

ಪುತ್ತೂರು, ಎ.20: ಬಂಟರ ಯಾನೆ ನಾಡವರ ಸಂಘ ಮಂಗಳೂರು ಮತ್ತು ಬಂಟರ ಸಂಘ ಪುತ್ತೂರು ತಾಲೂಕು ಇವುಗಳ ಆಶ್ರಯದಲ್ಲಿ ‘ಬಂಟ್ರೆ ಗೌಜಿ-2017’ ಬಂಟರ ಕುಟುಂಬ ಸಮ್ಮಿಲನ ಕಾರ್ಯಕ್ರಮ ಎ.23ರಂದು ಪುತ್ತೂರಿನ ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಲಿದೆ ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ತಿಳಿಸಿದ್ದಾರೆ.

 ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಎ.23ರಂದು ಬೆಳಿಗ್ಗೆ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ಜಗನ್ನಾಥ ರೈ ಮಾದೋಡಿ ಉದ್ಘಾಟಿಸಲಿದ್ದು, ಕೆ. ಸೀತಾರಾಮ ರೈ ಸವಣೂರು ಧ್ವಜಾರೋಹಣ ನಡೆಸಲಿದ್ದಾರೆ. ಬಳಿಕ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷ ಹಾಸೈ ವೈಭವ ‘ತೆಲಿಕೆದ ರಂಗ್’ ಹಾಗೂ ಬಂಟ ಸಂಸ್ಕೃತಿಗೆ ಪೂರಕವಾದ ವಿವಿಧ ಸ್ಪರ್ಧೆಗಳು ಮತ್ತು ಲಿಟ್ಲ್ ಸ್ಟಾರ್ ಪರ್‌ಫಾರ್ಮರ್ ಖ್ಯಾತಿಯ ನಿಶಾನ್ ರೈ ಮಠಂತಬೆಟ್ಟು ಬಳಗದಿಂದ ‘ಗಾನ ನೃತ್ಯ ವೈಭವ ನಡೆಯಲಿದೆ.

ಮಧ್ಯಾಹ್ನ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಲಿದ್ದಾರೆ. ಶಾಶಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಸಚಿವ ಬಿ. ರಮಾನಾಥ ರೈ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸನ್ಮಾನಿಸಲಿದ್ದಾರೆ. ಹಿರಿಯರಾದ ಚಂದ್ರಹಾಸ ರೈ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು. ಜೊತೆಗೆ ಸಾಧಕರಾದ ಅಂತಾರಾಷ್ಟ್ರೀಯ ಈಜುಪಟು ವೈಷ್ಣವ್ ಹೆಗ್ಡೆ, ಚಲನ ಚಿತ್ರ ನಟ ಶೀತಲ್ ಶೆಟ್ಟಿ ಆಲಂಕಾರು, ಯುವ ಗಾಯಕ ನಿಶಾನ್ ರೈ ಮಠಂತಬೆಟ್ಟು ಇವರಿಗೆ ಅಭಿನಂದನೆ ಹಾಗೂ 80 ವರ್ಷಗಳ ಸಾಧಕ ಸಂವತ್ಸರಗಳನ್ನು ಪೂರೈಸಿದ ಹಿರಿಯರಿಗೆ ಗೌರವಾರ್ಪಣೆ ನಡೆಯಲಿದೆ.

ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಬಂಟರ ಯಾನೆ ನಾಡವರ ಮಾತೃ ಸಂಘದ ಜೊತೆ ಕಾರ್ಯದರ್ಶಿ ಕಾವು ಹೇಮನಾಥ ಶೆಟ್ಟಿ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ನಿರಂಜನ ರೈ ಮಠಂತಬೆಟ್ಟು, ಕೋಶಾಧಿಕಾರಿ ಶಶಿಕುಮಾರ್ ರೈ ಬಾಲ್ಯೊಟ್ಟು, ಸಹ ಸಂಚಾಲಕ ಅಜ್ ಆಳ್ವ ಬಳ್ಳಮಜಲುಗುತ್ತು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News