×
Ad

ಸರಕಾರಿ ಸೌಲಭ್ಯಗಳ ಜಾರಿಗೆ ಸಂಘಟಿತರಾಗಿ ಹೋರಾಡೋಣ: ಮಹಾಂತೇಶ್

Update: 2017-04-20 21:55 IST

ಮಂಗಳೂರು, ಎ.20: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್‌ನಲ್ಲಿ ತಲೆಹೊರೆ ಕಾರ್ಮಿಕರಿಗಾಗಿ ಕೆಲವು ಯೋಜನೆಗಳ ಘೋಷಣೆಯಾಗಿದ್ದು, ಇದರ ಪರಿಣಾಮಕಾರಿ ಜಾರಿಗೆ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್‌ನ ಉಪಾಧ್ಯಕ್ಷ ಕಾಂ.ಕೆ.ಮಹಾಂತೇಶ್ ಬೆಂಗಳೂರು ಹೇಳಿದ್ದಾರೆ.

ನಗರದ ಮಿನಿವಿಧಾನಸೌಧ ಬಳಿಯ ಎನ್‌ಜಿಒ ಸಭಾಂಗಣದಲ್ಲಿ ಗುರುವಾರ ನಡೆದ ಬಂದರು ಪ್ರದೇಶ ಮಟ್ಟದ ತಲೆಹೊರೆ ಕಾರ್ಮಿಕರ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಸರಕಾರಿ ನೌಕರರಿಗೆ ಹಾಗೂ ಇತರ ಕಂಪೆನಿಗಳಲ್ಲಿ ದುಡಿಯುವ ನೌಕರರಿಗೆ ಸರಕಾರಿ ಸೌಲಭ್ಯಗಳು ಸಿಗುತ್ತಿವೆ. ಆದರೆ, ಹಮಾಲಿ ಕಾರ್ಮಿಕರು ಇಂತಹ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇತ್ತೀಚಿನ ಕೆಲವು ತಿಂಗಳುಗಳಿಂದ ಕಾರ್ಮಿಕ ಸಂಘಟನೆಗಳು ನಡೆಸಿರುವ ನಿರಂತರ ಹೋರಾಟದ ಫಲವಾಗಿ ಇಂದು ತಲೆಹೊರೆ ಕಾರ್ಮಿಕರಿಗೆ ಭವಿಷ್ಯ ನಿಧಿ ಪಡೆಯಲು ಸಾಧ್ಯವಾಗಿದೆ. ಅಲ್ಲದೆ, ಸರಕಾರದಿಂದ ಕೆಲವು ಯೋಜನೆಗಳು ಘೋಷಣೆಯಾಗಿದ್ದು, ಯೋಜನೆಗಳ ಪರಿಣಾಮಕಾರಿ ಜಾರಿಗೆ ಹೋರಾಡಬೇಕಾಗಿದೆ ಎಂದರು.

ಹಮಾಲಿ ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿ, ಕೆಲಸದ ಸಂದರ್ಭದಲ್ಲಿ ಆರೋಗ್ಯಕರ ವಾತಾವರಣ, ಭದ್ರತೆ, ನಿವೇಶನ, ವಸತಿ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಕಾರ್ಮಿಕರು ಹೋರಾಟ ನಡೆಸಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು. ದುಡಿಯುವ ಮಹಿಳೆಯರು ಇಂದಿಗೂ ಶೋಷಣೆಗೊಳಪಡುತ್ತಿದ್ದಾರೆ. ಸ್ತ್ರೀ-ಪುರುಷ ಕಾರ್ಮಿಕರಿಗೆ ಕೂಲಿ ತಾರತಮ್ಯ, ಲೈಂಗಿನ ದೌರ್ಜನ್ಯಗಳು ನಡೆಯುತ್ತಿವೆ. ದುಡಿಯುವ ಮಹಿಳೆಯರು ತಮ್ಮ ಜೀವಾನಾಧಾರಕ್ಕಾಗಿ ಹೆಚ್ಚಿನ ಸಂಕಷ್ಟ ಪಡುತ್ತಾರೆ. ದುಡಿಯುವ ಮಹಿಳೆಯು ಮನೆಕೆಲಸ, ಮಕ್ಕಳ ಪೋಷಣೆ ಸಹಿತ ಇತರ ಕೆಲಸಗಳನ್ನು ಪೂರ್ಣಗೊಳಿಸಿಯೇ ಮನೆಯಿಂದ ಹೊರಡುತ್ತಾರೆ. ಕೆಲಸದ ಸಂದರ್ಭದಲ್ಲೂ ಅವರಿಗೆ ಶೋಷಣೆಗಳು ತಪ್ಪಿಲ್ಲ. ದುಡಿಯುವ ಮಹಿಳೆಗೆ ಹೆರಿಗೆ ರಜಾ ಸೌಲಭ್ಯ, ಪಿಂಚಣಿ, ಪಿಎಫ್ ಸಹಿತ ಇತರ ಸೌಲಭ್ಯಗಳು ದೊರೆಯವ ತನಕ ಹೋರಾಟವನ್ನು ನಿರಂತರಗೊಳಿಸಬೇಕೆಂದು ಮಹಾಂತೇಶ್ ಕರೆ ನೀಡಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ತಲೆಹೊರೆ ಕಾರ್ಮಿಕರಿಗೆ ಕೆಲಸದ ಭದ್ರತೆಯ ಜೊತೆಗೆ ಆರ್ಥಿಕ ಭದ್ರತೆಯ ಅಗತ್ಯವಿದೆ ಎಂದರು.

ಬಂದರು ಪ್ರದೇಶ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಅಹ್ಮದ್ ಬಾವ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಹಮಾಲಿ ಕಾರ್ಮಿಕರ ಸಂಘದ ಖಜಾಂಚಿ ನಝೀರ್ ಬೆಂಗರೆ, ಹಮೀದ್ ಮಲಾರ್, ರಫೀಕ್ ಹರೇಕಳ, ವಿಲ್ಲಿ ವಿಲ್ಸನ್, ಸುಲೋಚನಾ, ಜಯಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News