ಜಲ ಜಾಗೃತಿಗಾಗಿ ಗುಲ್ಶನ್ ಮಕ್ಕಳಿಂದ ಮಾನವ ಸರಪಳಿ
ಉಡುಪಿ, ಎ.20: ಜಮಾಅತೆ ಇಸ್ಲಾಮಿ ಹಿಂದ್‌ನ ಮಕ್ಕಳ ವಿಭಾಗ ‘ಗುಲ್ಶನ್’ ವತಿಯಿಂದ ‘ನೀರು ಉಳಿಸಿ, ಭವಿಷ್ಯ ಸಂರಕ್ಷಿಸಿ’ ಘೋಷವಾಕ್ಯದಡಿ ಆಯೋಜಿಸಲಾದ ರಾಜ್ಯ ಮಟ್ಟದ ಅಭಿಯಾನದಲ್ಲಿ ಇಂದು ಉಡುಪಿಯ ನೂರಕ್ಕೂ ಅಧಿಕ ಮಕ್ಕಳು ಜಾಥಾ ನಡೆಸಿ ಮಾನವ ಸರಪಳಿ ರಚಿಸಿದರು.
ಅಭಿಯಾನದಲ್ಲಿ ಪಾಲ್ಗೊಂಡಿದ್ದ 5ರಿಂದ 15 ವರ್ಷ ವಯೋಮಿತಿಯೊಳಗಿನ ಮಕ್ಕಳು ಬಸ್‌ನಿಲ್ದಾಣದ ಪಕ್ಕದಲ್ಲಿರುವ ಕ್ಲಾಕ್ ಟವರ್ ಸುತ್ತ ಮಾನವ ಸರಪಳಿ ರಚಿಸಿ, ನೀರಿನ ಮಹತ್ವದ ಕುರಿತು ಜನತೆಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.
ಉಡುಪಿ ಜಾಮಿಯ ಮಸೀದಿ ಆವರಣದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ಸೂರಜ್ ಭಟ್ ಹಾಗೂ ಮಣಿಪಾಲ ವಿವಿಯ ಡಾ.ಅಬ್ದುಲ್ ಅಝೀಝ್ ಗಿಡಗಳಿಗೆ ನೀರೆರೆಯುವ ಮೂಲಕ ರ್ಯಾಲಿ ಹಾಗೂ ಮಾನವ ಸರಪಳಿಗೆ ಚಾಲನೆ ನೀಡಿದರು. ಬಳಿಕ ಗುಲ್ಶನ್‌ನ ಮಕ್ಕಳು ಕ್ಲಾಕ್‌ಟವರ್‌ವರೆಗೆ ಜಾಥಾ ನಡೆಸಿ ಅಲ್ಲಿ ಮಾನವ ಸರಪಳಿ ರಚಿಸಿದರು.
ನವಿದಾ ಹುಸೈನ್ ಅಸ್ಸಾದಿ ಹಾಗೂ ಗುಲ್ಶನ್ ಅಭಿಯಾನದ ಸಂಚಾಲಕಿ ಮೆಹರುನ್ನೀಸಾ ನೇತೃತ್ವದಲ್ಲಿ ಮಕ್ಕಳು ಮಾನವ ಸರಪಳಿಯನ್ನು ರಚಿಸಿದರು. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ಮಹಿಳಾ ವಿಭಾಗದ ಶಹೀದಾ ರಿಯಾಝ್, ಜಮಾಅತೆ ಇಸ್ಲಾಮಿ ಹಿಂದ್‌ನ ಕಾರ್ಯದರ್ಶಿ ನಿಸ್ಸಾರ್ ಅಹ್ಮದ್, ಸಾದಿಕಾ ಮುಂತಾದವರು ಉಪಸ್ಥಿತರಿದ್ದರು.