ಜಲೀಲ್ ಕರೋಪಾಡಿ ಹತ್ಯೆ: ಪ್ರಕರಣ ಸಿಐಡಿಗೆ ವಹಿಸಲು ಆಗ್ರಹ
ಮಂಗಳೂರು, ಎ. 20: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಬೇಕೆಂದು ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಆಗ್ರಹಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಓರ್ವ ಜನಪ್ರತಿನಿಧಿಯನ್ನು ಹಾಡಹಗಲೇ ಹತ್ಯೆ ಮಾಡುತ್ತಾರೆಂದರೆ ಹಂತಕರಿಗೆ ಕಾನೂನು ಮತ್ತು ಪೊಲೀಸ್ ಇಲಾಖೆಯ ಭಯ ಇಲ್ಲ ಎಂಬುದನ್ನು ತೋರಿಸುತ್ತದೆ. ಘಟನೆಯಿಂದ ಜಿಲ್ಲೆಯ ಕಾನೂನು ಸುವ್ಯವಸ್ಥೆ ಏನಾಗಿದೆ ಎಂಬ ಪ್ರಶ್ನೆ ಕಾಡುತ್ತಿದೆ. ಹಾಡಹಾಗಲೇ ನಡೆದ ಈ ಹತ್ಯೆಯು ಭಯದ ವಾತಾವರಣವನ್ನು ಸೃಷ್ಟಿಸಿದ್ದು, ಪೊಲೀಸ್ ಇಲಾಖೆಯು ಜನರ ನಂಬಿಕೆ ಗಳಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದ್ದಾರೆ.
ಜಲೀಲ್ ಕರೋಪಾಡಿಯವರನ್ನು ತಾನು ಹತ್ತಿರದಿಂದ ಬಲ್ಲವನು. ಎಂಟು ವರ್ಷಗಳ ಹಿಂದೆ ಯೂತ್ ಕಾಂಗ್ರೆಸ್ ವತಿಯಿಂದ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಜಲೀಲ್ ಕೂಡ ಆಗಮಿಸಿದ್ದರು. ಅವರ ಪಕ್ಷ ನಿಷ್ಠೆ, ಪ್ರಾಮಾಣಿಕತೆ, ಜಾತ್ಯತೀತ ಮನೋಭಾವ ಮಾದರಿಯಾದುದು. ಎಲ್ಲರೂ ಪ್ರೀತಿಸುವ ಉತ್ತಮ ಗುಣ ನಡತೆಯ ವ್ಯಕ್ತಿತ್ವವನ್ನು ಹೊಂದಿದವರು. ಅವರ ತಂದೆಯೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಜಲೀಲ್ ಅವರ ಅಗಲಿಕೆಯಿಂದ ಪಕ್ಷಕ್ಕೆ ಮತ್ತು ಸಮುದಾಯಕ್ಕೆ ನಷ್ಟವಾಗಿದೆ ಎಂದು ಪಿ.ವಿ.ಮೋಹನ್ ತಿಳಿಸಿದ್ದಾರೆ.