ಅಂಗಡಿಯ ವಿಚಾರಕ್ಕೆ ಸಂಬಂಧಿಸಿ ಐವರ ಮೇಲೆ ಹಲ್ಲೆ: ಆರೋಪ
ಮಂಗಳೂರು, ಎ. 20: ಅಂಗಡಿಯ ವಿಚಾರಕ್ಕೆ ಸಂಬಂಧಿಸಿ ಐವರ ಮೇಲೆ ಹಲ್ಲೆ ನಡೆಸಿರುವ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಹಲ್ಲೆಗೊಳಗಾದವರನ್ನು ಕಡಬ ಕೊಂಬಾರು ನಿವಾಸಿಗಳಾದ ಕುಂಞಣ್ಣರ ಪುತ್ರರಾದ ಸತೀಶ್ ಮತ್ತು ವಿಜಯ್, ಪದ್ಮಯ್ಯ ಎಂಬವರ ಪುತ್ರರಾದ ವಸಂತ ಮತ್ತು ಗೋಪಾಲ ಹಾಗೂ ಆನಂದ ಎಂಬವರ ಪುತ್ರ ಮನೋಜ್ ಎಂದು ಗುರುತಿಸಲಾಗಿದೆ. ಈ ಪೈಕಿ ಸತೀಶ್ ಮತ್ತು ವಸಂತ ಅವರಿಗೆ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ತನ್ನ ಸಂಬಂಧಿಕರೊಬ್ಬರು ಕೊಂಬಾರಿನಲ್ಲಿ ರೇಶನ್ ಅಂಗಡಿಯೊಂಂದನ್ನು ಇಟ್ಟಿಕೊಂಡಿದ್ದು, ಇದಕ್ಕೆ ಸ್ಥಳೀಯ ಕೆಲವರು ವಿರೋಧ ವ್ಯಕ್ತಪಡಿಸಿ ಬೆದರಿಕೆಯನ್ನು ಒಡ್ಡುತ್ತಿದ್ದರು. ಇದೇ ವಿಚಾರವಾಗಿ ಇಂದು ಕೂಡ ಗಲಾಟೆ ನಡೆದಿದ್ದು, ಈ ಬಗ್ಗೆ ಮಾತನಾಡಲೆಂದು ಸತೀಶ್ ಮತ್ತು ವಸಂತ ಎಂಬವರು ಆರೋಪಿಗಳ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಗುಂಪೊಂದು ಮಾರಕಾಸ್ತ್ರಗಳಿಂದ ತಲೆಗೆ ಹಲ್ಲೆ ನಡೆಸಿದ್ದಾರೆ. ಇವರನ್ನು ಬಿಡಿಸಲು ಹೋದ ನಮ್ಮ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ವಿಜಯ ತಿಳಿಸಿದ್ದಾರೆ.
ಕೊಂಬಾರು ನಿವಾಸಿಗಳಾದ ಆನಂದ, ಶೇಖರ, ಸುಂದರ, ಪೊಡಿಯ, ದೇವಕಿ, ಚಂದ್ರಾವತಿ, ಲಲಿತಾ ಕುಸುಮಾ, ಕಮಲಾ, ಪದೆಂಜು ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾಗಿರುವ ಮನೋಜ್ ಆರೋಪಿಸಿದ್ದಾರೆ.