×
Ad

ಜಲೀಲ್ ಕೊಲೆ ಪ್ರಕರಣ: ಬಂಟ್ವಾಳ ಪಿಎಫ್ ಐ ಖಂಡನೆ

Update: 2017-04-20 23:15 IST

ಬಂಟ್ವಾಳ, ಎ.20: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್‌ ರ ಕೊಲೆಯನ್ನು ತೀವ್ರವಾಗಿ ಖಂಡಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಇಜಾಝ್ ಅಹ್ಮದ್, ಹಾಡಹಗಲೇ ಗ್ರಾಪಂ ಕಚೇರಿಗೆ ನುಗ್ಗಿ ಉಪಾಧ್ಯಕ್ಷರೊಬ್ಬರನ್ನು ಕೊಲೆ ನಡೆಸುವಷ್ಟು ಮಟ್ಟಕ್ಕೆ ದುಷ್ಕರ್ಮಿಗಳು ಧೈರ್ಯ ತೋರಿಸಿರುವುದು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ತಿಳಿಸಿದ್ದಾರೆ.

ಕರಾವಳಿ ಜಿಲ್ಲೆಯಲ್ಲೇ ಅತೀ ಹೆಚ್ಚಾಗಿ ಬಂಟ್ವಾಳ ತಾಲೂಕಿನಲ್ಲಿ ಕೊಲೆ, ಕೊಲೆಯತ್ನ ಸೇರಿದಂತೆ ಜಾನುವಾರು ವ್ಯಾಪಾರಿಗಳ ಮೇಲೆ ಹಲ್ಲೆ ಮೊದಲಾದ ಅಪರಾಧ ಕೃತ್ಯಗಳು ಪದೇ ಪದೇ ನಡೆಯುತ್ತಿದೆ. ತಾಲೂಕಿನಲ್ಲಿ ಗಾಂಜಾ, ಮರಳು ಮಾಫಿಯಾಗಳು ದೊಡ್ಡ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದು ತಮ್ಮನ್ನು ವಿರೋಧಿಸುವವರ ಮೇಲೆ ಕಾನೂನಿನ ಭಯವೇ ಇಲ್ಲದೆ ದಾಳಿಗಳು ನಡೆಸುತ್ತಿವೆ. ವಿವಿಧ ಮಾಫಿಯಾಗಳು ಹಾಗೂ ಅಪರಾಧ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿರುವುದು ತಾಲೂಕಿನಲ್ಲಿ ನಡೆಯುತ್ತಿರುವ ವಿವಿಧ ಪ್ರಕರಣಗಳಿಂದ ಸಾಬೀತಾಗುತ್ತಿದೆ ಎಂದು ಆರೋಪಿಸಿರುವ ಅವರು, ಅಬ್ದುಲ್ ಜಲೀಲ್ ಕೊಲೆಯಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News