ದೇರಳಕಟ್ಟೆ: ಸಮಸ್ತ ನೇತಾರರ ಸ್ವೀಕರಣಾ ಸಮಾರಂಭ

Update: 2017-04-20 17:57 GMT

ಕೊಣಾಜೆ, ಎ.20: ಸಮಸ್ತ ಎನ್ನುವುದು ಮಹಾನ್ ಧಾರ್ಮಿಕ ಗುರುಗಳ ನೇತೃತ್ವವಾಗಿದ್ದು, ಇಲ್ಲಿ ಕೈಗೊಳ್ಳುವ ತೀರ್ಮಾನ, ಶರೀಯತ್ ಎಂದಿಗೂ ಅಳಿಸಲಾಗದ್ದು ಎಂದು ಸಮಸ್ತ ಕೇರಳ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಸ್ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ತಿಳಿಸಿದರು.

ದೇರಳಕಟ್ಟೆ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಹಾಗೂ ಜಂ-ಇಯ್ಯತುಲ್ ಮುಅಲ್ಲಿಮೀನ್ ಜಂಟಿ ಆಶ್ರಯಲ್ಲಿ ಗುರುವಾರ ದೇರಳಕಟ್ಟೆ ಬದ್ರಿಯಾ ಮಸೀದಿ ವಠಾರದಲ್ಲಿ ನಡೆದ ಸಮಸ್ತ ನೂತನ ನೇತಾರರ ಸ್ವೀಕರಣಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಇಸ್ಲಾಮಿಕ್ ಶರೀಯತ್ ಅಂತ್ಯ ದಿನದವರೆಗೂ ನೆಲೆ ನಿಲ್ಲಬೇಕಿರುವುದರಿಂದ ಅದನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕಿದ್ದು, ಸಮಸ್ತ ಜೊತೆ ಸರ್ವರೂ ಕೈಜೋಡಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಇಬ್ರಾಹಿಂ ಬಾಖವಿ ಕೆ.ಸಿ.ರೋಡ್ ಮಾತನಾಡಿ, ಸಮಸ್ತ ನೇತಾರರು ತಮ್ಮ ಜೀವನ ಕಾಲದಲ್ಲಿ ಎಂದಿಗೂ ಎಡವಿದರಲ್ಲ. ಅಧಿಕಾರ, ಅಂತಸ್ತಿಗೆ ಹಾತೊರೆದವರಲ್ಲ. ಮನುಷ್ಯನಿಗೆ ದೇವನು ವಿಶೇಷವಾದ ಬುದ್ಧಿ ಶಕ್ತಿ ನೀಡಿದ್ದು ಅದನ್ನು ಸಮರ್ಥವಾಗಿ ಬಳಸಿ ಉತ್ತಮ ಕಾರ್ಯಗಳೊಂದಿಗೆ ಮುನ್ನಡೆದರೆ ಮನುಷ್ಯನಿಗಿಂತ ಉತ್ತಮರು ಇನ್ಯಾರೂ ಇರಲಾರರು ಎಂದು ಹೇಳಿದರು.

ಕಿನ್ಯ ದಾರುಸ್ಸಲಾಂ ಸಂಶುಲ್ ಉಲಮಾ ಅಕಾಡಮಿ ಅಧ್ಯಕ್ಷ ಸೈಯದ್ ಅಮೀರ್ ತಂಙಳ್ ನೇತೃತ್ವದಲ್ಲಿ ತಹ್‌ಲೀಲ್ ಸಮರ್ಪಣೆ ನಡೆಯಿತು. ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಶ್ರಫ್ ರಹ್ಮಾನಿ ಚೌಕ ಮುಖ್ಯ ಭಾಷಣ ಮಾಡಿದರು. ಉಳ್ಳಾಲ ಮೆಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್, ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಕೋಶಾದಿಕಾರಿ ಮೆಟ್ರೋ ಶಾಹುಲ್ ಹಮೀದ್, ದೇರಳಕಟ್ಟೆ ಮಸೀದಿ ಅಧ್ಯಕ್ಷ ಅಬೂಬಕ್ಕರ್ ನಾಟೆಕಲ್, ಮಾಜಿ ಅಧ್ಯಕ್ಷ ಇಸ್ಮಾಯಿಲ್ ದೇರಳಕಟ್ಟೆ, ಕೋಶಾಧಿಕಾರಿ ಅಬ್ದುರ್ರಹ್ಮಾನ್ ಪನೀರ್, ದೇರಳಕಟ್ಟೆ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ ರೆಂಜಾಡಿ, ಪ್ರಧಾನ ಕಾರ್ಯದರ್ಶಿ ಫಾರೂಕ್ ದಾರಿಮಿ, ಸ್ವಾಗತ ಸಮಿತಿ ಅಧ್ಯಕ್ಷ ಇಸ್ಹಾಕ್ ನಾಟೆಕಲ್, ರೇಂಜ್ ಮದರಸ ಮ್ಯಾನೇಜ್‌ಮೆಂಟ್ ಗೌರವಾಧ್ಯಕ್ಷ ಅಬ್ಬಾಸ್, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಘಟಕಾಧ್ಯಕ್ಷ ಸಯ್ಯದಾಲಿ ಮೊದಲಾದವರು ಉಪಸ್ಥಿತರಿದ್ದರು.

ರೇಂಜ್ ಮದ್ರಸ ಮೆನೇಜ್‌ಮೆಂಟ್ ಮಾಜಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News