×
Ad

ಬೀಡಿ ಲೇಬರ್ ಯೂನಿಯನ್‌ನ ವಾರ್ಷಿಕ ಮಹಾಸಭೆ

Update: 2017-04-20 23:52 IST

ಉಡುಪಿ, ಎ.20: ಉಡುಪಿ ತಾಲೂಕು ಬೀಡಿ ಲೇಬರ್ ಯೂನಿಯನ್ (ಎಐಟಿಯುಸಿ)ನ 72ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಗರದ ಹಿಂದಿ ಪ್ರಚಾರ ಸಮಿತಿ ಸಭಾಭವನದಲ್ಲಿ ಯೂನಿಯನ್‌ನ ಅಧ್ಯಕ್ಷೆ ಶಾಂತಾ ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಬೀಡಿ ಕಾರ್ಮಿಕರ ಆರು ಪ್ರಮುಖ ಬೇಡಿಕೆಗಳ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಇವುಗಳಲ್ಲಿ ಪ್ರಸ್ತುತ ಬೆಲೆ ಏರಿಕೆಯಿಂದಾಗಿ ಬೀಡಿ ಕಾರ್ಮಿಕರ ಜೀವನ ದುಸ್ತರವಾಗಿದ್ದು, ಹೀಗಾಗಿ ಒಂದು ಸಾವಿರ ಬೀಡಿ ಸುತ್ತುವುದಕ್ಕೆ ಕನಿಷ್ಠ ವೇತನ 300 ರೂ.ನಿಗದಿ ಪಡಿಸಬೇಕು, ಬೆಲೆ ಏರಿಕೆಗನುಗುಣವಾಗಿ ಏರಿಕೆಯಾದ ತುಟ್ಟಿ ಭತ್ಯೆಯನ್ನು ಎ.1ರಿಂದಲೇ ಜಾರಿಗೊಳಿಸಬೇಕು. ಅಲ್ಲದೇ ಹಿಂದಿನ ಬಾಕಿ ತುಟ್ಟಿಭತ್ಯೆ 12.75ನ್ನು ಸೇರಿಸಿ ಏರಿಯರ್ಸ್‌ ಸಹಿತ ನೀಡಬೇಕು ಎಂದು ಆಗ್ರಹಿಸಲಾಯಿತು.

ಸಂಘದ ಖಜಾಂಚಿ ಕೆ.ವಿ.ಭಟ್ ಅವರು ಹಿಂದಿನ ವರ್ಷದ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ಚರ್ಚೆಯ ಬಳಿಕ ಅದನ್ನು ಅಂಗೀಕರಿಸಲಾಯಿತು. ಸಂಘದ ಮುಂದಿನ ವರ್ಷದ ಅವಧಿಗೆ 50 ಮಂದಿ ಇರುವ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಪದಾಧಿಕಾರಿಗಳಾಗಿ ಶಾಂತಾ ನಾಯಕ್ ಅಧ್ಯಕ್ಷೆ, ಆನಂದ ಪೂಜಾರಿ, ರಾಮ ಮೂಲ್ಯ ಶಿರ್ವ, ಸುಮತಿ ಶೆಟ್ಟಿ ಕೋಟ್ನಕಟ್ಟೆ ಉಪಾಧ್ಯಕ್ಷರು, ಶಶಿಕಲಾ ಗಿರೀಶ್ ಪ್ರಧಾನ ಕಾರ್ಯದರ್ಶಿ, ಅಪ್ಪಿ ಶೇರಿಗಾರ್, ಸಂಜೀವ ಶೇರಿಗಾರ್, ವಾರಿಜ ನಾಯ್ಕ ಆತ್ರಾಡಿ, ಸಹಕಾರ್ಯದರ್ಶಿಯಾಗಿ ಕೆ.ವಿ.ಭಟ್ ಖಜಾಂಚಿಯಾಗಿ ಆಯ್ಕೆಗೊಂಡರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಸ್.ಕೆ.ಬೀಡಿ ವರ್ಕರ್ಸ್‌ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ವಿ.ಸೀತಾರಾಂ ಬೇರಿಂಜ ಮಾತನಾಡಿದರು.

ಎಐಟಿಯುಸಿ ನಾಯಕ ಬಿ. ಶೇಖರ್ ಸಂಘಟನೆಯ ವರದಿ ಮಂಡಿಸಿದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಎಐಟಿಯುಸಿ ಮುಖಂಡರಾದ ಆನಂದ ಪೂಜಾರಿ, ರಾಜು ಪೂಜಾರಿ ಪರ್ಕಳ, ರಾಮ ಮೂಲ್ಯ ಶಿರ್ವ, ಸಂಜೀವ ಶೇರಿಗಾರ್ ಕಿನ್ನಿಮೂಲ್ಕಿ, ಸುಮತಿ ಶೆಟ್ಟಿ, ಅಪ್ಪಿ ಶೇರಿಗಾರ್ ಉದ್ಯಾವರ ಉಪಸ್ಥಿತರಿದ್ದರು. ಯೂನಿಯನ್ ಖಜಾಂಚಿ ಕೆ.ವಿ.ಭಟ್ ಸ್ವಾಗತಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಗಿರೀಶ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News