ಭಾರೀ ಜನಸಮ್ಮುಖದಲ್ಲಿ ನೆರವೇರಿತು ಜಲೀಲ್ ಕರೋಪಾಡಿ ಅಂತ್ಯ ಸಂಸ್ಕಾರ

Update: 2017-04-21 13:43 GMT

ಬಂಟ್ವಾಳ, ಎ. 21: ದುಷ್ಕರ್ಮಿಗಳಿಂದ ಗುರುವಾರ ಹತ್ಯೆಗೀಡಾದ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್‌ರವರ ಮೃತದೇಹದ ದಫನ ಕಾರ್ಯವು ಶುಕ್ರವಾರ ಕರೋಪಾಡಿ ಸಮ್ಮಡ್ಕ ಬದ್ರಿಯಾ ಜುಮಾ ಮಸೀದಿಯಲ್ಲಿ ನೆರವೇರಿತು.

ಜಲೀಲ್‌ರವರ ಸಹೋದರರಿಬ್ಬರು ವಿದೇಶದಿಂದ ಬರುವ ಹಿನ್ನೆಲೆಯಲ್ಲಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಶಿತಲೀಕರಣದಲ್ಲಿ ಇರಿಸಲಾಗಿದ್ದ ಮೃತದೇಹವನ್ನು ಇಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಜಲೀಲ್‌ರವರ ಮನೆಗೆ ತಂದು ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್ ಸಹಿತ ನೂರಾರು ಮಂದಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ವಿವಿಧ ಪಕ್ಷಗಳ ನಾಯಕರು, ಗ್ರಾಮಸ್ಥರು, ಕುಟುಂಬಸ್ಥರು, ಸಾರ್ವಜನಿಕರು, ವಿವಿಧ ಧರ್ಮದ ಮುಖಂಡರು ಅಂತಿಮ ದರ್ಶನ ಪಡೆದರು.

ತದನಂತರ ಅಲ್ಲಿಂದ ಸಮ್ಮಡ್ಕ ಬದ್ರಿಯಾ ಜುಮಾ ಮಸೀದಿಗೆ ತಂದು ನಮಾರ್ ನಿರ್ವಹಿಸಿದ ಬಳಿಕ ದಫನ ಕಾರ್ಯ ನೆರವೇರಿಸಲಾಯಿತು. ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್, ಕಾವಳಕಟ್ಟೆ ಹಝ್ರತ್ ತಂಙಳ್, ಅಲಿ ತಂಙಳ್ ಕುಂಬೋಳ್ ಮೊದಲಾದವರು ಭೇಟಿ ನೀಡಿ ವಿಧಿವಿಧಾನಗಳನ್ನು ನಡೆಸಿ ಕೊಟ್ಟರು.

ಬಂಟ್ವಾಳ ತಾಲೂಕು ಪಂಚಾಯತ್ ಹಿರಿಯ ಸದಸ್ಯ, ಜಲೀಲ್‌ರವರ ತಂದೆ ಉಸ್ಮಾನ್ ಹಾಜಿ ಕರೋಪಾಡಿ, ಜಲೀಲ್‌ರವರ ಸಹೋದರರು ಹಾಗೂ ಸಂಬಂಧಿಕರ ದುಃಖ ಮುಗಿಲು ಮುಟ್ಟಿತ್ತು. ಈ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಸಚಿವರ ಸಹಿತ ಜನಪ್ರತಿನಿಧಿಗಳು, ಜನರು ಮನಸ್ಸು ಕರಗಿ ಕಣ್ಣೀರು ಸುರಿಸುತ್ತಿದ್ದ ದೃಶ್ಯ ಕಂಡು ಬಂದವು. ಹಾಗೆಯೇ ಘಟನೆ ನಡೆದ ಬಳಿಕದಿಂದ ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ.

ಈ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮುಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಶಾಹುಲ್ ಹಮೀದ್, ಅರ್ಷದ್ ವಾರ್ಕಾಡಿ, ಬಂಟ್ವಾಳ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್ ಸಹಿತ ತಾಪಂ ಸದಸ್ಯರು, ವಿವಿಧ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

23 ಗಾಯದ ಗುರುತುಗಳು!: ಎ.ಅಬ್ದುಲ್ ಜಲೀಲ್‌ರವರ ಕೊಲೆಗೆ ದುಷ್ಕರ್ಮಿಗಳ ತಂಡ ತಲವಾರುಗಳಿಂದ ಯದ್ವಾತದ್ವಾ ದಾಳಿ ನಡೆಸಿದ್ದರಿಂದ ಮೃತದೇಹದಲ್ಲಿ 23 ಗಾಯದ ಗುರುತುಗಳು ಪತ್ತೆಯಾಗಿದೆ. ಕುತ್ತಿಗೆ ಭಾಗಕ್ಕೆ ಎರಡು ಹಾಗೂ ಭುಜಕ್ಕೆ ಬಲವಾದ ತಲವಾರು ಏಟು ಬಿದ್ದು ಆಳವಾದ ಗಾಯದಿಂದ ಉಂಟಾದ ರಕ್ತ ಸ್ರಾವದಿಂದ ಜಲೀಲ್ ಮೃತಪಟ್ಟಿದ್ದಾರೆ. ಉಳಿದಂತೆ ದೇಹದಲ್ಲಿ ಪತ್ತೆಯಾದ ಗಾಯಗಳಿಂದ ಅವರ ಜೀವಕ್ಕೆ ಅಪಾಯವಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.

ದುಷ್ಕರ್ಮಿಗಳ ಪತ್ತೆಗೆ ಐದು ತಂಡ: ಅಬ್ದುಲ್ ಜಲೀಲ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಅಪರಾಧಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ತಂಡ ದುಷ್ಕರ್ಮಿಗಳ ಪತ್ತೆಗೆ ಕೇರಳ ರಾಜ್ಯದ ಪೊಲೀಸರ ಸಹಾಯವನ್ನು ಕೋರಿದೆ ಎಂದು ತಿಳಿದು ಬಂದಿದೆ. ಹಲವು ಕ್ರಿಮಿನಲ್ ಹಿನ್ನೆಲೆಯುಳ್ಳ ಹಾಗೂ ಹಲವು ಸಮಾಜ ದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾಗಿರುವವರಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ.

ಪಕ್ಷಕ್ಕೂ, ಗ್ರಾಮಕ್ಕೆ ತುಂಬಲಾದ ನಷ್ಟವಾಗಿದೆ: ಸಚಿವ ರೈ

ಸರಳ, ಸಜ್ಜನಿಕೆಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್‌ರವರ ಸಾವು ಪಕ್ಷಕ್ಕೆ ಹಾಗೂ ಕರೋಪಾಡಿ ಗ್ರಾಮಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಜಲೀಲ್‌ರವರ ಮೃತದೇಹದ ಅಂತ್ಯ ಸಂಸ್ಕಾರ ನೆರವೇರಿದ ಬಳಿಕ ಸಮ್ಮಡ್ಕ ಜುಮಾ ಮಸೀದಿಯ ವಠಾರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನನ್ನ ಆತ್ಮೀಯರಾಗಿದ್ದ ಜಲೀಲ್ ಸಮಾಜದ ಎಲ್ಲ ಜಾತಿ, ಧರ್ಮದ ಜನರೊಂದಿಗೆ ಅನ್ಯೋನ್ಯತೆಯಿಂದ ಊರಿನ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದವರು. ಯಾರ ಜೊತೆಯೂ ಹಗೆತನವನ್ನು ಇಟ್ಟಿರದ ಜಲೀಲ್ರನ್ನು ಯಾವ ಉದ್ದೇಶಕ್ಕೆ ಕೊಲೆ ಮಾಡಲಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದರು.

ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರಾಗಿ ನಾನು ಬೆಂಗಳೂರಿನಲ್ಲಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಜಲೀಲ್ ನೀವು ವಿಶ್ರಾಂತಿ ಪಡೆಯಿರಿ ನಿಮ್ಮ ಕೆಲಸಗಳನ್ನು ನಾನು ಮಾಡುತ್ತೇನೆ ಎಂದಿದ್ದರು. ಕ್ರಿಯಾಶೀಲವಾಗಿದ್ದ ಮಗನನ್ನು ಕಳೆದುಕೊಂಡ ಜಲೀಲ್‌ರವರ ಹೆತ್ತವರಿಗೆ ಹಾಗೂ ಕುಟುಂಬಸ್ಥರಿಗೆ ಸಮಾಧಾನವನ್ನು ದೇವರು ನೀಡಲಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ ಅವರು, ಕೊಲೆಗೆ ಸಂಬಂಧಿಸಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಕೊಲೆ ನಡೆಸಿರುವ ದುಷ್ಕರ್ಮಿಗಳನ್ನು ಶೀರ್ಘವೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸುವ ಭರವಸೆ ನೀಡಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಉತ್ತಮ ನಾಯಕನನ್ನು ಕಳೆದುಕೊಂಡೆವು: ಸಚಿವ ಖಾದರ್

ಜಿಲ್ಲೆಯ ಉತ್ತಮ ನಾಯಕನೊಬ್ಬನನ್ನು ನಾವು ಕಳೆದುಕೊಂಡಿದ್ದೇವೆ. ಉತ್ತಮ ವ್ಯಕ್ತಿತ್ವದೊಂದಿಗೆ ಸಮಾಜದಲ್ಲಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಸೌಹಾರ್ದತೆಯ ಕೊಂಡಿಯಾಗಿದ್ದ ಜಲೀಲ್‌ರನ್ನು ಕಳೆದುಕೊಂಡಿರುವುದು ನಮಗೆ ದುಃಖ ಉಂಟುಮಾಡಿದೆ ಎಂದು ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು.

ಜಲೀಲ್‌ರವರ ಅಂತ್ಯಕ್ರೀಯೆಯ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕೊಲೆಗೈದ ದುಷ್ಕರ್ಮಿಗಳು ಯಾರೇ ಆದರೂ ಅವರನ್ನು ಪೊಲೀಸರು ಪತ್ತೆ ಹಚ್ಚಿ ಸೂಕ್ತ ಕ್ರಮ ಜರಗಿಸುತ್ತಾರೆ. ಕೊಲೆಗಾರರ ಪತ್ತೆಗೆ ಈಗಾಗಲೇ ಜಿಲ್ಲಾ ಎಸ್ಪಿಯವರ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ.

ಮಗನನ್ನು ಕಳೆದುಕೊಂಡ ಹೆತ್ತವರಿಗೂ, ಕುಟುಂಬಸ್ಥರಿಗೂ ನೋವನ್ನು ತುಂಬುವ ಶಕ್ತಿಯನ್ನು ದೇವರು ನೀಡಲಿ ಎಂದ ಅವರು, ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆ ಹೆಚ್ಚಾಗಿರುವುದರ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಹಾಗೂ ಈ ಬಗ್ಗೆ ಗೃಹ ಸಚಿವರೊಂದಿಗೂ ಚರ್ಚಿಸಲಾಗುವುದು. ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಪೊಲೀಸರು ಶ್ರಮ ವಹಿಸುತ್ತಿದ್ದಾರೆ. ಅವರೊಂದಿಗೆ ಸಾರ್ವಜನಿಕರು ಕೂಡಾ ಸಹಕರಿಸಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News