ವಿದೇಶಿ ಉದ್ಯೋಗಿಗೆ ಪತ್ನಿಯಿಂದ ಲಕ್ಷಾಂತರ ರೂ. ವಂಚನೆ: ದೂರು
ಮೂಡುಬಿದಿರೆ, ಎ.21: ವಿದೇಶದಲ್ಲಿ ಉದ್ಯೋಗದಲ್ಲಿದ್ದ ಪತಿಗೆ ವಂಚಿಸಿದ ಪತ್ನಿಯ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಡಂದಲೆಯ ಸಂತೋಷ್ ಶೆಟ್ಟಿ ಎಂಬವರು ದೂರು ನೀಡಿದವರು. ಸಂತೋಷ್ ಶೆಟ್ಟಿ ಕುವೈತ್‌ನಲ್ಲಿ ಉದ್ಯೋಗದಲ್ಲಿದ್ದ ಸಂದರ್ಭ 2011ರಲ್ಲಿ ಬೆಳ್ತಂಗಡಿ ತಾಲೂಕು ಕಾಶಿಪಟ್ನದ ಅಪೂರ್ವಾ ಶೆಟ್ಟಿ ಎಂಬವರನ್ನು ವಿವಾಹವಾಗಿದ್ದರು. ವಿವಾಹದ ಸಂದರ್ಭ ಸುಮಾರು 25 ಲಕ್ಷ ರೂ. ವೌಲ್ಯದ ಚಿನ್ನಾಭರಣವನ್ನು ಪತ್ನಿಗೆ ನೀಡಿದ್ದೆ. ಅಲ್ಲದೇ ವಿವಾಹದ ಬಳಿಕ ಮತ್ತೆ ಕುವೈತ್‌ಗೆ ತೆರಳಿ ತನ್ನ ದುಡಿಮೆಯಲ್ಲಿ ಲಕ್ಷಾಂತರ ರೂಪಾಯಿಯನ್ನು ಪತ್ನಿಗೆ ಕಳುಹಿಸಿದ್ದೆ. ಒಟ್ಟು 63 ಲಕ್ಷ ರೂ.ವನ್ನು ಪತ್ನಿ ಅಪೂರ್ವಾ ಶೆಟ್ಟಿಯ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇರಿಸಿದ್ದೆ ಎಂದು ಸಂತೋಷ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.
ಇದರ ಜೊತೆಗೆ ಕಡಂದಲೆಯಲ್ಲಿ 28 ಲಕ್ಷ ರೂ. ವೌಲ್ಯದ ಮನೆ, ಬೈಕ್, ಕೈನೆಟಿಕ್ ಹಾಗೂ ಒಂದು ಕಾರು ಕೂಡಾ ಆಕೆಯ ಹೆಸರಿನಲ್ಲಿಯೇ ಇತ್ತು. ಜೊತೆಗೆ ತನ್ನ ಎಲ್ಲಾ ದಾಖಲೆ ಪತ್ರಗಳು ಮನೆಯಲ್ಲಿತ್ತು. ಇದೀಗ ತಾನು ಕುವೈತ್‌ನ ಉದ್ಯೋಗ ತೊರೆದು ಊರಿನಲ್ಲೇ ನೆಲೆಸಲು ನಿರ್ಧರಿಸಿದ್ದೇನೆ. ಆದರೆ ಪತ್ನಿ ಹಾಗೂ ಆಕೆಯ ಮನೆಯವರು ಇದನ್ನು ಆಕ್ಷೇಪಿಸಿದ್ದು, ತನ್ನ ಆಸ್ತಿಯ ದಾಖಲೆ ಪತ್ರ ಹಾಗೂ ಸೊತ್ತುಗಳನ್ನು ನೀಡಲು ನಿರಾಕರಿಸುತ್ತಿದ್ದಾರೆ. ಜೊತೆಗೆ ಮನೆಗೆ ಬಂದರೆ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾರೆಂದು ಸಂತೋಷ್ ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.