ಬಿಐಟಿಯಲ್ಲಿ ರಾಷ್ಟ್ರಮಟ್ಟದ ಇಂಜಿನಿಯರ್‌ಗಳ ಕಾರ್ಯಾಗಾರಕ್ಕೆ ಚಾಲನೆ

Update: 2017-04-21 12:13 GMT

ಮಂಗಳೂರು, ಎ.21: ವೇಗದ ತಂತ್ರಜ್ಞಾನವನ್ನು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಲು ಮತ್ತು ಅಭಿವೃದ್ಧಿಪಡಿಸಲು ದೇಶದಲ್ಲಿ ಇನ್ನಷ್ಟು ಸಂಶೋಧನಾ ಚಟುವಟಿಕೆಗಳು ನಡೆಯಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ಭೈರಪ್ಪ ತಿಳಿಸಿದ್ದಾರೆ. ಬ್ಯಾರೀಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ನೇತೃತ್ವದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ (‘ಹೈ ಸ್ಪೀಡ್ ಪ್ಲೋವ್ಸ್ ಆ್ಯಂಡ್ ಡಾಕ್ ಎಚ್.ಎಸ್. ಡಾಕ್’) ಯಾಂತ್ರಿಕತೆಯಲ್ಲಿ ವೇಗದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಇಂಜಿನಿಯರ್‌ಗಳ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
 ಪ್ರಸ್ತುತ ವೇಗದ ತಂತ್ರಜ್ಞಾನವನ್ನು ಬಳಸುವ ಬಾಹ್ಯಕಾಶ, ವೈಮಾನಿಕ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಎದುರಿಸಬೇಕಾಗಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡು ಕೊಳ್ಳುವ ದೃಷ್ಟಿಯಿಂದ ಈ ಕ್ಷೇತ್ರದ ಬಗ್ಗೆ ಇನ್ನಷ್ಟು ಗಮನಹರಿಸಬೇಕಾದ ಅಗತ್ಯ ಕಂಡು ಬರುತ್ತಿದೆ. ಈ ದೃಷ್ಟಿಯಿಂದ ವೇಗದ ತಂತ್ರಜ್ಞಾನದ ಬಗ್ಗೆ ಹಮ್ಮಿಕೊಳ್ಳಲಾಗುವ ಇಂತಹ ಕಾರ್ಯಾಗಾರಗಳು ಮಹತ್ವದ್ದಾಗಿವೆ ಎಂದರು.
 
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ಇಸ್ರೋದ ಎರೋಡೈನಾಮಿಕ್ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ.ಆರ್.ಸಿ.ಮೆಹ್ತಾ ಮಾತನಾಡಿ, ವೇಗದ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿ ದೇಶದಲ್ಲಿ ಸಾಕಷ್ಟು ತಾಂತ್ರಿಕತೆ ಅಭಿವೃದ್ಧಿಯಾಗಿಲ್ಲ. ಈ ಕಾರಣಕ್ಕೆ ನಾವು ಇತರ ದೇಶಗಳನ್ನು ಅವಲಂಭಿಸಬೇಕಾಗಿದೆ. ದೇಶದಲ್ಲೇ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದರಿಂದ ಸಾಕಷ್ಟು ಅನುಕೂಲತೆಗಳಿವೆ. ದೇಶದಲ್ಲಿ ಮೆಕಾನಿಕ್ ಇಂಜಿನಿಯರಿಂಗ್ ಕ್ಷೇತ್ರದ ಸವಾಲುಗಳನ್ನು ತಿಳಿದುಕೊಳ್ಳಲು ಈ ಕಾರ್ಯಾಗಾರ ಮಹತ್ವದ್ದಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಆಕಾಡಮಿ ಆಫ್ ಲರ್ನಿಂಗ್ ಸೆಂಟರ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ವಿಜ್ಞಾನಿಗಳು-ಸಂಶೋಧಕರು ಸ್ವಾರ್ಥರಹಿತ ಮನೋಭಾವದವರಾಗಿರುವ ಕಾರಣ ತಾವು ಹಲವು ವರ್ಷಗಳ ಪರಿಶ್ರಮದ ಮೂಲಕ ಪಡೆದ ಸಂಶೋಧನೆಯ ಫಲವನ್ನು ಜಗತ್ತಿಗೆ ನೀಡುತ್ತಿದ್ದಾರೆ. ಈ ರೀತಿಯ ಸಂಶೋಧಕ ಪ್ರವೃತ್ತಿಗೆ ನಿಖರವಾದ ಯೋಚನೆ, ಪರಿಶುದ್ಧವಾದ ಹೃದಯ ಮುಖ್ಯ ಎಂದರು
 ಸಮಾರಂಭದಲ್ಲಿ ಐಐಯುಎಂ ಮಲೇಶ್ಯ ಇದರ ಪ್ರೊಫೆಸರ್ ಡಾ.ಎಸ್.ಎ.ಖಾನ್ , ಬಿಐಟಿಯ ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ಬಿಐಟಿ ಪಾಲಿಟೆಕ್ನಿಕ್‌ನ ಪ್ರಾಮಶುಪಾಲ ಡಾ.ಅಝೀಝ್ ಮುಸ್ತಫಾ, ಬೀಡ್ಸ್‌ನ ಪ್ರಾಂಶುಪಾಲ ಪ್ರೊ.ಭಾವಿಶ್ ಮೆಹ್ತಾ ಮೊದಲಾದವರು ಉಪಸ್ಥಿತರಿದ್ದರು. ಮುಹಮ್ಮದ್ ಅಝಾದುಲ್ಲಾ ಸ್ವಾಗತಿಸಿದರು. ಮುಹಮ್ಮದ್ ರಶೀದ್ ವಂದಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News