ದುಗ್ಗಪ್ಪ ಅವಿಸ್ಮರಣೀಯ ಚೇತನ: ಮುರಲಿ ಕಡೆಕಾರ್
ಉಡುಪಿ, ಎ.21: ಸದಭಿರುಚಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿ, ವಿವಿಧ ಸಂಘಗಳೊಡನೆ ಅವಿನಾಭಾವದ ಸಂಬಂಧವನ್ನು ಹೊಂದಿದ್ದ ಯು.ದುಗ್ಗಪ್ಪ ಆದರ್ಶ ಪ್ರಾಯರು. ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಶ್ರೇಷ್ಠ ಎನಿಸಿ ಮಾದರಿ ವ್ಯಕ್ತಿತ್ವ, ಸಹೃದಯಿ ಗುಣ ನಡತೆಯಲ್ಲಿ ಸಮಾಜದ ಆಸ್ತಿಯಾಗಿದ್ದರು. ಯಕ್ಷಗಾನದ ಉನ್ನತಿಗೆ ನೀಡಿದ ಅಪಾರ ಕೊಡುಗೆಗಳಿಂದ ಅವರೊಬ್ಬ ಅವಿಸ್ಮರಣೀಯ ಚೇತನ ಎಂದು ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸುಮನಸಾ ಕೊಡವೂರು ಆಶ್ರಯ ದಲ್ಲಿ ಮೈಸೂರು ರಂಗಾಯಣದ ವತಿಯಿಂದ ಎರಡು ದಿನಗಳ ಕಾಲ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡ ರಂಗಾಯಣ ರಂಗಪಯಣ ನಾಟಕೋತ್ಸವ ಯು.ದುಗ್ಗಪ್ಪರಿಗೆ ಕಲಾ ನಮನ ಕಾರ್ಯಕ್ರಮ ದಲ್ಲಿ ನುಡಿನಮನ ಸಲ್ಲಿಸಿದರು.
ತೊಟ್ಟಂ ಗಜಾನನ ಯಕ್ಷಗಾನ ಮಂಡಳಿ ಕಲಾ ಕಾರ್ಯದರ್ಶಿ ಶಶಿಧರ್ ಅಮೀನ್, ಮಲ್ಪೆ ಬೀಚ್‌ನ ಜ್ಞಾನಜ್ಯೋತಿ ಭಜನಾ ಮಂದಿರದ ಅಧ್ಯಕ್ಷ ಕಿಶೋರ್ ಡಿ.ಸುವರ್ಣ, ರಂಗಾಯಣ ಮೈಸೂರು ಪ್ರಧಾನ ಶಿಕ್ಷಕ ಅಂಜು ಸಿಂಗ್, ಸುಮನಸಾದ ಗೌರವಾಧ್ಯಕ್ಷ ಎಂ.ಎಸ್.ಭಟ್ ಉಪಸ್ಥಿತರಿದ್ದರು. ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ದಯಾನಂದ ಯು. ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಂಗಾಯಣ ಯುವ ರಂಗ ಘಟಕದ ಸದಸ್ಯರಿಂದ ‘ದಿಂಡಿ’ ನಾಟಕ ಪ್ರದರ್ಶನಗೊಂಡಿತು.