ಎನ್ನೆಸ್ಸೆಸ್‌ಗೆ 13ಕೋಟಿ ರೂ. ಅನುದಾನ: ಸಚಿವ ಪ್ರಮೋದ್
ಉಡುಪಿ, ಎ.21: ಎನ್ನೆಸ್ಸೆಸ್ ಸ್ವಯಂ ಸೇವಕರ ಸಂಖ್ಯೆಯನ್ನು 3.50 ಲಕ್ಷದಿಂದ 10 ಲಕ್ಷಕ್ಕೆ ಏರಿಸುವ ಗುರಿಯನ್ನು ಹೊಂದಲಾಗಿದ್ದು, ಪ್ರಸ್ತುತ 4.75 ಲಕ್ಷಕ್ಕೆ ಏರಿಕೆಯಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಎನ್ನೆಸ್ಸೆಸ್‌ಗೆ 13ಕೋಟಿ ರೂ. ಅನು ದಾನವನ್ನು ರಾಜ್ಯ ಸರಕಾರ ಮೀಸಲಿರಿಸಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಜನಸೇವೆ ಹಾಗೂ ಕ್ರೀಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಮಿನಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಎನ್ನೆಸ್ಸೆಸ್ ಘಟಕದ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ರಾಜ್ಯ ಸರಕಾರ ನೀಡಿರುವ ಅನುದಾನದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಎನ್ನೆಸ್ಸೆಸ್ ಯುವಕರಲ್ಲಿ ಸೇವಾ ಮನೋ ಭಾವನೆಯನ್ನು ಬೆಳೆಸುತ್ತಿದೆ. ಸರಕಾರ ಕೂಡ ಇದಕ್ಕೆ ಕಟಿಬದ್ಧವಾಗಿದೆ ಎಂದು ಅವರು ಹೇಳಿದರು.
ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ಸ್ವಾಮೀಜಿ ಆಶೀರ್ವಚನ ನೀಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯ ಅನಾವರಣಕ್ಕೆ ಎನ್ನೆಸ್ಸೆಸ್ ಸೂಕ್ತ ವೇದಿಕೆ ಯಾಗಿದೆ. ವಿದ್ಯಾರ್ಥಿಗಳು ಇದಕ್ಕೆ ಸೇರುವ ಮೂಲಕ ಅದರ ಪ್ರಯೋಜನ ಪಡೆದುಕೊಳ್ಳಬೇಕು. ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಎನ್ನೆಸ್ಸೆಸ್ ಮಾಡುತ್ತಿದೆ ಎಂದರು.
ರಾಜ್ಯ ಎನ್ನೆಸ್ಸೆಸ್ ಯೋಜನಾಧಿಕಾರಿ, ರಾಜ್ಯ ಸರಕಾರದ ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು, ಕರ್ನಾಟಕ ಬಾಲ ವಿಕಾಸ ಅಕಾ ಡೆಮಿಯ ಉಡುಪಿ ಜಿಲ್ಲಾ ಅನುಷ್ಠಾನ ಸಮಿತಿಯ ಸದಸ್ಯ ಆರೂರು ತಿಮ್ಮಪ್ಪ ಶೆಟ್ಟಿ, ಎಸ್‌ಪಿಇಸಿ ಆಡಳಿತ ಮಂಡಳಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮಾತನಾಡಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಸುಕನ್ಯಾ ಮೇರಿ ಜೆ. ವಹಿಸಿದ್ದರು. ಸಂಯೋ ಜನಾಧಿಕಾರಿಗಳಾದ ರಮಾನಂದ ರಾವ್, ಮಲ್ಲಿಕಾ ಕಾರ್ಯಕ್ರಮ ಆಯೋಜಿಸಿ ದರು. ವಿದ್ಯಾರ್ಥಿ ಮುಖಂಡರಾದ ರಕ್ಷಿತಾ ಜೋಗಿ, ಶ್ರೀಹರಿ ಭಟ್, ಮೇಧಾಶ್ರೀ, ಸ್ವಸ್ತಿಕಾ ಶೆಟ್ಟಿ ಉಪಸ್ಥಿತರಿದ್ದರು. ಚಿನ್ಮಯ್ ಕಶ್ಯಪ್ ಅವರಿಂದ ಯೋಗ ಪ್ರದರ್ಶನ, ರಿಯಾಲಿಟಿ ಶೋ, ಪ್ರತಿಭಾಗಳಾದ ರಜತ್ ಮಯ್ಯ, ಪಲ್ಲವಿ, ರಾಜಶ್ರೀ ಉನ್ನತಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.