ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಮತ್ತದೇ ಟ್ರಾಫಿಕ್ ಸಮಸ್ಯೆಗಳ ಸುರಿಮಳೆ
ಮಂಗಳೂರು, ಎ. 21: ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರತೀ ಶುಕ್ರವಾರ ನಡೆಯುವ ಪೊಲೀಸ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಿದ್ದು, ಶುಕ್ರವಾರ ಕೂಡ ಅದೇ ಸಮಸ್ಯೆ ಪ್ರತಿಧ್ವನಿಸಿತು. 37ನೆ ವಾರದ ಈ ಫೋನ್ ಇನ್ ಕಾರ್ಯಕ್ರಮದಲ್ಲಿ 22 ಮಂದಿ ಕರೆ ಮಾಡಿ ಹಲವು ಸಮಸ್ಯೆಗಳನ್ನು ಪೊಲೀಸರ ಗಮನಕ್ಕೆ ತಂದರು.
ಹಿರಿಯ ನಾಗರಿಕರಿಗೆ ಬಸ್ಸಿನಲ್ಲಿ ಸೀಟು ಸಿಗದಿರುವ ಬಗ್ಗೆ, ಬಸ್ ಹತ್ತುವ ಮೊದಲೇ ನಿರ್ವಾಹಕ ರೈಟ್ ಹೇಳುವುದು, ವಾಹನಗಳಿಗೆ ಹೈಬೀಮ್ ಲೈಟ್, ಕರ್ಕಶ ಹಾರ್ನ್, ಬಸ್‌ಗಳನ್ನು ತಂಗುದಾಣದಲ್ಲಿ ನಿಲ್ಲಿಸದೆ ದೂರ ನಿಲ್ಲಿಸುವುದು, ಜಂಕ್ಷನ್‌ಗಳಲ್ಲಿರುವ ಝೀಬ್ರಾ ಕ್ರಾಸ್‌ನಲ್ಲಿ ವಾಹನ ನಿಲ್ಲಿಸುವುದರಿಂದ ಪಾದಚಾರಿಗಳಿಗೆ ರಸ್ತೆ ದಾಟಲು ಸಾಧ್ಯವಾಗದಿರುವ ಬಗ್ಗೆ ಸಾರ್ವಜನಿಕರು ಅಹವಾಲುಗಳನ್ನು ಹೇಳಿಕೊಂಡರು. ಸಮಸ್ಯೆಗಳನ್ನು ಆಲಿಸಿದ ಡಿಸಿಪಿ ಕೆ.ಎಂ.ಶಾಂತರಾಜು ‘ಈ ಬಗ್ಗೆ ತಪಾಸಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ, ಹಿರಿಯ ನಾಗರಿಕರಿಗೆ ಸೀಟು ಬಿಟ್ಟು ಕೊಡದಿದ್ದರೆ ಸ್ಥಳದಲ್ಲಿಯೇ ‘ಕುಡ್ಲ ಟ್ರಾಫಿಕ್’ಗೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಸೂಚಿಸಿದರು.
ಪಣಂಬೂರು ವೃತ್ತದಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಬ್ಯಾರಿಕೇಡ್ ನಿರ್ಮಾಣ ಮಾಡಬೇಕು ಎಂದು ವ್ಯಕ್ತಿಯೊಬ್ಬರು ಮನವಿ ಮಾಡಿಕೊಂಡರು.ಈ ಬಗ್ಗೆ ಟ್ರಾಫಿಕ್ ಪೊಲೀಸರು ಪರಿಶೀಲಿಸಿ ಕ್ರಮಕೈಗೊಳ್ಳುವರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ಎ.ಜೆ. ಆಸ್ಪತ್ರೆ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಹೆದ್ದಾರಿಗಳಲ್ಲಿ ಎಲ್ಲ ಕಡೆ ಯು-ಟರ್ನ್ ಸೌಲಭ್ಯ ಕೊಡಲು ಸಾಧ್ಯವಿಲ್ಲ. ವಾಹನ ಸವಾರರು ಟ್ರಾಫಿಕ್ ನಿಯಮಗಳನ್ನು ಅನುಸರಿಸುವುದು ಅಗತ್ಯ ಎಂದು ಡಿಸಿಪಿ ಹೇಳಿದರು.
ಮುಚ್ಚೂರಿನಲ್ಲಿ ಮುಂಜಾನೆ 3 ಗಂಟೆಗೆ ಬಾರ್ ತೆರೆಯಲಾಗುತ್ತಿದೆ. ಡೈವಿಂಗ್ ಲೈಸನ್ಸ್ ಇಲ್ಲದ ಹದಿ ಹರೆಯದ ಹುಡುಗರು ದ್ವಿಚಕ್ರ ವಾಹನ ಚಲಾಯಿಸುತ್ತಾರೆ. ಕ್ರಿಕೆಟ್ ಬೆಟಿಂಗ್ ಕೂಡಾ ನಡೆಯುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರು ನೀಡಿದರು. ಮುಡಿಪು-ಸ್ಟೇಟ್‌ಬ್ಯಾಂಕ್ ನಡುವೆ ಸಂಚರಿಸುವ ನರ್ಮ್ ಬಸ್‌ಗಳು ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಮಾರ್ಗವಾಗಿ ಸಂಚರಿಸುವಂತಾಗ ಬೇಕು ಎಂದು ಸಾರ್ವಜನಿಕರೊಬ್ಬರು ಸಲಹೆ ನೀಡಿದ್ದು, ಈ ಬಗ್ಗೆ ಆರ್‌ಟಿಒ ಮತ್ತು ಕೆಎಸ್ಸಾರ್ಟಿಸಿ ವಿಭಾಗ ಕಚೇರಿಗೆ ಪತ್ರ ಬರೆಯಲಾಗುವುದು ಎಂದು ಡಿಸಿಪಿ ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ನೀರಿನ ಸಮಸ್ಯೆ ಬಗ್ಗೆ ವ್ಯಕ್ತಿಯೊಬ್ಬರು ಪ್ರಸ್ತಾವಿಸಿ ಪಾಲಿಕೆಯು ನೀರು ಬಿಡುವ ಮತ್ತು ನೀರು ಬಿಡದಿರುವ ದಿನಗಳನ್ನು ಸ್ಪಷ್ಟವಾಗಿ ತಿಳಿಸಬೇಕು. ನೀರು ಬಳಕೆದಾರರು ನಳ್ಳಿ ನೀರಿನ ಟ್ಯಾಪ್‌ಗಳನ್ನು ಆನ್ ಮಾಡಿಯೇ ಇರಿಸುವುದರಿಂದ ಕೆಲವೊಮ್ಮೆ ಅನಿರೀಕ್ಷಿತವಾಗಿ ನೀರು ಪೂರೈಕೆ ಆಗುವ ಸಂದರ್ಭ ನೀರು ವ್ಯರ್ಥವಾಗಿ ಪೋಲಾಗುತ್ತಿದೆ. ನೀರು ಬಿಡುವ ಬಗ್ಗೆ ಮುಂಚಿತವಾಗಿ ಮಾಹಿತಿ ಇದ್ದರೆ ಟ್ಯಾಪ್‌ಗಳನ್ನು ಆ್ ಮಾಡಿ ಇರಿಸಲು ಅನುಕೂಲವಾಗುತ್ತದೆ ಎಂದು ಸಲಹೆ ಮಾಡಿದರು. ಈ ಬಗ್ಗೆ ಪಾಲಿಕೆಯ ಗಮನಕ್ಕೆ ತರಲಾಗುವುದು ಎಂದು ಡಿಸಿಪಿ ತಿಳಿಸಿದರು.
ಕೊಟ್ಟಾರ ಬಸ್ ತಂಗುದಾಣದಲ್ಲಿ ಮಧ್ಯಾಹ್ನದ ವೇಳೆಗೆ ಕೆಲವು ಬಸ್ ಚಾಲಕರು ಬಸ್‌ಗಳನ್ನು ಗಂಟೆಗಟ್ಟಲೆ ರಸ್ತೆ ಬದಿ ನಿಲ್ಲಿಸಿ ಹೋಗುವುದರಿಂದ ಬೇರೆ ಬಸ್‌ಗಳು ಬರುವಾಗ ಪ್ರಯಾಣಿಕರಿಗೆ ಕಾಣಿಸದೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದರು. ಈ ಬಗ್ಗೆ ಬಸ್ ನಂಬ್ರ ಸಮೇತ ‘ಕುಡ್ಲ ಟ್ರಾಫಿಕ್’ಗೆ (ಮೊ.ಸಂ: 9480802312) ದೂರು ಸಲ್ಲಿಸುವಂತೆ ಎಸಿಪಿ ತಿಲಕ್‌ಚಂದ್ರ ತಿಳಿಸಿದರು. ರೂಟ್ ನಂಬರ್ 15ರ ಕೆಲವು ಸಿಟಿ ಬಸ್‌ಗಳು ಜಪ್ಪು ಮೋರ್ಗನ್ಸ್‌ಗೇಟ್ ಪ್ರವೇಶಿಸದೆ ಮಾರ್ನಮಿಕಟ್ಟೆ ಮಾರ್ಗವಾಗಿ ಒಳ ರಸ್ತೆಯಿಂದಲೇ ಸಂಚರಿಸುತ್ತಿವೆ.ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಪ್ರಯಾಣಿಕರೊಬ್ಬರು ದೂರು ನೀಡಿದರು. ಈ ಬಗ್ಗೆ ಬಸ್ ನಂಬ್ರ ಸಹಿತ ಮಾಹಿತಿ ಒದಗಿಸುವಂತೆ ಎಸಿಪಿ ತಿಲಕ್‌ಚಂದ್ರ ಸೂಚಿಸಿದರು.
ಕೆಲವು ರಿಕ್ಷಾಗಳಿಗೆ ಹಿಂಬದಿ ಮಿರರ್ ಅಳವಡಿಸಿದ್ದು, ಇದು ಹಿಂಬದಿಯ ವಾಹನಗಳ ಸವಾರರ ಕಣ್ಣಿಗೆ ಕುಕ್ಕುತ್ತಿವೆ ಎಂಬ ದೂರಿಗೆ ಸ್ಪಂದಿಸಿದ ಡಿಸಿಪಿ ಶಾಂತರಾಜು ಈ ಕುರಿತು ತಪಾಸಣೆ ನಡೆಸಲಾಗುವುದು ಎಂದರು.
ಆಸ್ಪತ್ರೆಯ 100 ಮೀಟರ್ ವ್ಯಾಪ್ತಿಯಲ್ಲಿ ಲೌಡ್ ಸ್ಪೀಕರ್ ಬಳಸಬಾರದೆಂಬ ನಿಯಮವಿದ್ದರೂ ವೆನ್ಲಾಕ್ ಆಸ್ಪತ್ರೆಯ ಪಕ್ಕದಲ್ಲಿ ಲೌಡ್‌ಸ್ವೀಕರ್ ಬಳಕೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ಆರೋಪಿಸಿದರು. ಈ ಬಗ್ಗೆ ತಪಾಸಣೆ ನಡೆಸಲಾಗುವುದು ಎಂದು ಎಸಿಪಿ ತಿಲಕ್ ಚಂದ್ರ ಹೇಳಿದರು.
ಸ್ಟೇಟ್‌ಬ್ಯಾಂಕ್‌ನಿಂದ ಜಪ್ಪು ಮಹಾಕಾಳಿ ಪಡ್ಪು ಮಾರ್ಗವಾಗಿ ಬಜಾಲ್‌ಗೆ ಸಂಚರಿಸುವ ಸಿಟಿ ಬಸ್‌ಗಳ ಕೊನೆಯ ಟ್ರಿಪ್ ರಾತ್ರಿ 9:50 ಎಂದಿದ್ದರೂ 7:30ಕ್ಕೆ ಮೊಟಕುಗೊಳಿಸುತ್ತಿವೆ ಎಂದು ಸಾರ್ವಜನಿಕರೊಬ್ಬರು ತಿಳಿಸಿದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಲಿಖಿತವಾಗಿ ದೂರು ದಾಖಲಿಸುವಂತೆ ಎಸಿಪಿ ಸಲಹೆ ಮಾಡಿದರು. ಎಸಿಪಿ ವೆಲೆಂಟೈನ್ ಡಿ’ಸೋಜಾ, ಇನ್‌ಸ್ಪೆಕ್ಟರ್ ರಫೀಕ್, ಎಎಸ್ಸೈ ಯೂಸುಫ್, ಸಿಬಂದಿ ಪುರುಷೋತ್ತಮ ಉಪಸ್ಥಿತರಿದ್ದರು.