ದಲಾಯಿ ಅರುಣಾಚಲ ಭೇಟಿಗೆ ಬೆಲೆ ತೆರುತ್ತೀರಿ : ಭಾರತಕ್ಕೆ ಚೀನಾ ಪತ್ರಿಕೆಯ ಎಚ್ಚರಿಕೆ

Update: 2017-04-21 14:26 GMT

ಬೀಜಿಂಗ್, ಎ. 21: ಟಿಬೆಟ್‌ನ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾರ ಅರುಣಾಚಲಪ್ರದೇಶ ಭೇಟಿಗೆ ಅವಕಾಶ ನೀಡಿರುವುದಕ್ಕೆ ಭಾರತ ‘ದುಬಾರಿ’ ಬೆಲೆ ತೆರಬೇಕಾಗುತ್ತದೆ ಎಂದು ಚೀನಾದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಶುಕ್ರವಾರ ಹೇಳಿದೆ.

ಅರುಣಾಚಲಪ್ರದೇಶದ ಆರು ಸ್ಥಳಗಳಿಗೆ ಚೀನಾ ತನ್ನದೇ ಹೆಸರುಗಳನ್ನು ಇಟ್ಟಿರುವುದು ದಲಾಯಿ ಲಾಮಾ ಭೇಟಿಗೆ ಚೀನಾ ತೆಗೆದುಕೊಂಡಿರುವ ಪ್ರತೀಕಾರವಾಗಿದೆ ಎಂಬ ಸೂಚನೆಯನ್ನು ಅದು ನೀಡಿದೆ.

ಅರುಣಾಚಲಪ್ರದೇಶದ ಆರು ಸ್ಥಳಗಳಿಗೆ ತನ್ನದೇ ಹೆಸರು ಮತ್ತು ಉಚ್ಚಾರಣೆಯನ್ನು ಘೋಷಿಸಿದ ಕೆಲವೇ ದಿನಗಳ ಬಳಿಕ ಚೀನಾದ ಪತ್ರಿಕೆಯು ಈ ಹೊಸ ಬೆದರಿಕೆಯನ್ನು ಹಾಕಿದೆ.ಹೊಸ ಹೆಸರುಗಳನ್ನು ತಳ್ಳಿಹಾಕಿರುವ ಭಾರತ, ರಾಜ್ಯದ ‘ಪ್ರತಿ ಇಂಚು’ ದೇಶಕ್ಕೆ ಸೇರಿದೆ ಎಂದು ಹೇಳಿದೆ.

‘‘ಚೀನಾ ಈ ಹಂತದಲ್ಲಿ ದಕ್ಷಿಣ ಟಿಬೆಟ್‌ನ ಹಲವು ಸ್ಥಳಗಳಿಗೆ ತನ್ನದೇ ಆದ ಹೆಸರು ಮತ್ತು ಉಚ್ಚಾರಣೆಗಳನ್ನು ಯಾಕೆ ಪ್ರಕಟಿಸಿದೆ ಎನ್ನುವುದರ ಬಗ್ಗೆ ಭಾರತ ಗಂಭೀರವಾಗಿ ವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ ಇದು. ದಲಾಯಿ ಲಾಮಾರನ್ನು ಬಳಸಿಕೊಂಡು ರಾಜಕೀಯ ಮಾಡುವುದು ಭಾರತಕ್ಕೆ ಯಾವತ್ತಿಗೂ ಉತ್ತಮ ಆಯ್ಕೆಯಲ್ಲ. ಇಂಥ ಕ್ಷುಲ್ಲಕ ಆಟವನ್ನು ಮುಂದುವರಿಸಲು ಭಾರತ ಬಯಸಿದರೆ, ಅದು ದುಬಾರಿ ಬೆಲೆ ತೆರಬೇಕಾಗುತ್ತದೆ’’ ಎಂದು ‘ಗ್ಲೋಬಲ್ ಟೈಮ್ಸ್’ ಹೇಳಿದೆ.

ಅರುಣಾಚಲಪ್ರದೇಶವನ್ನು ಚೀನಾ ದಕ್ಷಿಣ ಟಿಬೆಟ್ ಎಂಬುದಾಗಿ ಪರಿಗಣಿಸುತ್ತಿದೆ.ಚೀನಾ ಭಾರತಕ್ಕಿಂತ ಹೆಚ್ಚು ಬಲಿಷ್ಠ ದೇಶ ಎಂದು ಹೇಳಿರುವ ಲೇಖನವು, ಯಾವ ದೇಶ ಹೆಚ್ಚು ಬಲಿಷ್ಠ ಎಂಬುದನ್ನು ನಿರ್ಧರಿಸಬೇಕಾದ ಸಮಯ ಬಂದರೆ, ಉಭಯ ದೇಶಗಳ ನಡುವಿನ ಗಡಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಚೀನಾ ಮಾತುಕತೆಯ ಮೇಜಿನಲ್ಲಿ ಕುಳಿತುಕೊಳ್ಳಬೇಕಾದ ಅವಶ್ಯಕತೆಯಿಲ್ಲ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News