ಭಾರತದ ಪ್ರತಿಕ್ರಿಯೆ ಪ್ರಚೋದನಾತ್ಮಕ : ಪಾಕ್

Update: 2017-04-21 14:36 GMT

ಇಸ್ಲಾಮಾಬಾದ್, ಎ. 21: ಭಾರತೀಯ ನಾಗರಿಕ ಕುಲಭೂಷಣ್ ಜಾಧವ್‌ಗೆ ಗಲ್ಲು ಶಿಕ್ಷೆ ನೀಡಿರುವುದಕ್ಕೆ ಭಾರತ ವ್ಯಕ್ತಪಡಿಸಿರುವ ಪ್ರತಿಕ್ರಿಯೆ ‘ಪ್ರಚೋದನಾತ್ಮಕ’ವಾಗಿದೆ ಎಂದು ಪಾಕಿಸ್ತಾನ ಬಣ್ಣಿಸಿದೆ.

ನ್ಯಾಯೋಚಿತ ವಿಚಾರಣೆಯಲ್ಲಿ ಆತ ‘‘ಬೇಹುಗಾರಿಕೆ ಮತ್ತು ಭಯೋತ್ಪಾದನೆಯಲ್ಲಿ ತೊಡಗಿರುವುದು’’ ಸಾಬೀತಾಗಿದೆ ಎಂದಿದೆ.

‘‘ಪಾಕಿಸ್ತಾನದಲ್ಲಿ ಬೇಹುಗಾರಿಕೆ ಮತ್ತು ಭಯೋತ್ಪಾದನೆ ಚಟುವಟಿಕೆಗಳಲ್ಲಿ ಆತ ತೊಡಗಿರುವುದನ್ನು ಸಾಬೀತುಪಡಿಸುವ ನಿರ್ದಿಷ್ಟ ಹಾಗೂ ವಿಶ್ವಾಸಾರ್ಹ ಪುರಾವೆಯನ್ನು ಆಧರಿಸಿ ನ್ಯಾಯಾಲಯ ಆತನಿಗೆ ಶಿಕ್ಷೆ ನೀಡಿದೆ. ಆತ ನಡೆಸಿದ ಭಯೋತ್ಪಾದನೆ ಚಟುವಟಿಕೆಗಳಲ್ಲಿ ಪಾಕಿಸ್ತಾನೀಯರ ಹಲವಾರು ಅಮೂಲ್ಯ ಜೀವಗಳು ಬಲಿಯಾಗಿವೆ’’ ಎಂದು ಪಾಕಿಸ್ತಾನದ ವಿದೇಶ ಕಚೇರಿ ವಕ್ತಾರ ನಫೀಸ್ ಝಕಾರಿಯ ಹೇಳಿದರು.

ನೆಲದ ಕಾನೂನಿನ ಪ್ರಕಾರ ನಡೆದ ‘ನ್ಯಾಯೋಚಿತ ವಿಚಾರಣೆ’ಯ ಬಳಿಕ ಆತ ತಪ್ಪಿತಸ್ಥನೆಂದು ಸಾಬೀತಾಗಿದೆ’’ ಎಂದರು.

‘‘ಭಾರತದಿಂದ ಬರುತ್ತಿರುವ ಪ್ರಚೋದನಾತ್ಮಕ ಹೇಳಿಕೆಗಳು ಅಂತಾರಾಷ್ಟ್ರೀಯ ನಿಯಮಗಳಿಗೆ ವಿರುದ್ಧವಾಗಿದೆ ಹಾಗೂ ಕೇವಲ ಉದ್ವಿಗ್ನತೆಯನ್ನು ಮಾತ್ರ ಹೆಚ್ಚಿಸುತ್ತವೆ. ಅದರಿಂದ ಬೇರೆ ಯಾವುದೇ ರಚನಾತ್ಮಕ ಉದ್ದೇಶ ಈಡೇರುವುದಿಲ್ಲ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬುಡಮೇಲು ಹಾಗೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾರತ ಸರಕಾರದ ಶಾಮೀಲಾತಿ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಅದರ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳಬೇಕಾಗಿದೆ’’ ಎಂದು ಝಕಾರಿಯ ಅಭಿಪ್ರಾಯಪಟ್ಟರು.

ಅಮೆರಿಕದ ಮಧ್ಯಪ್ರವೇಶ ಕೋರಿ ಆನ್‌ಲೈನ್ ಅಭಿಯಾನ

ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಕುಲಭೂಷಣ್ ಜಾಧವ್‌ರನ್ನು ರಕ್ಷಿಸಲು ಅಮೆರಿಕದ ಟ್ರಂಪ್ ಆಡಳಿತ ಮಧ್ಯಪ್ರವೇಶಿಸಬೇಕೆಂದು ಕೋರಿ ಅಮೆರಿಕದಲ್ಲಿರುವ ಭಾರತೀಯ ಅಮೆರಿಕನ್ ಸಮುದಾಯ ಶ್ವೇತಭವನದ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮನವಿ ಆಂದೋಲನವೊಂದನ್ನು ಆರಂಭಿಸಿದೆ.

‘ಎಸ್.ಎಸ್.’ ಎಂಬ ಹೆಸರಿನ ವ್ಯಕ್ತಿಯೊಬ್ಬರು ಆರಂಭಿಸಿರುವ ‘ವೀ ದ ಪೀಪಲ್ ಪಿಟಿಶನ್’, ಜಾಧವ್ ವಿರುದ್ಧ ಹೊರಿಸಲಾಗಿರುವ ಬೇಹುಗಾರಿಕೆ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ಕಪೋಲ ಕಲ್ಪಿತ ಎಂದು ಹೇಳಿದೆ.

ಈ ಮನವಿಗೆ ಟ್ರಂಪ್ ಆಡಳಿತ ಪ್ರತಿಕ್ರಿಯಿಸಬೇಕಾದರೆ ಅದು ಮೇ 14ರ ಮುನ್ನ ಕನಿಷ್ಠ ಒಂದು ಲಕ್ಷ ಸಹಿಯನ್ನು ಗಳಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News