ದೈತ್ಯ ಬಾಂಬ್‌ನ ಸಾವಿನ ಸಂಖ್ಯೆಯನ್ನು ಹೇಳುವುದಿಲ್ಲ : ಜಿಮ್ ಮ್ಯಾಟಿಸ್

Update: 2017-04-21 14:43 GMT

ವಾಶಿಂಗ್ಟನ್, ಎ. 21: ಅಫ್ಘಾನಿಸ್ತಾನದಲ್ಲಿರುವ ಐಸಿಸ್ ಭದ್ರ ಕೋಟೆಯೊಂದರ ಮೇಲೆ ಕಳೆದ ವಾರ ನಡೆಸಲಾದ ಅತ್ಯಂತ ದೊಡ್ಡ ಪರಮಾಣೇತರ ಬಾಂಬ್ ದಾಳಿಯು ಉಂಟು ಮಾಡಿದ ಹಾನಿಯ ಬಗ್ಗೆ ಚರ್ಚಿಸಲು ತಾನು ಬಯಸುವುದಿಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಗುರುವಾರ ಹೇಳಿದ್ದಾರೆ.

ಪಾಕಿಸ್ತಾನದ ಗಡಿ ಸಮೀಪದಲ್ಲಿರುವ ಐಸಿಸ್‌ನ ಗುಹಾ ಅಡಗುದಾಣವೊಂದರ ಮೇಲೆ ಎಪ್ರಿಲ್ 13ರಂದು ಜಿಬಿಯು-43ಬಿ ಅಥವಾ ‘ಮದರ್ ಆಫ್ ಆಲ್ ಬಾಂಬ್ಸ್’ (ಎಲ್ಲ ಬಾಂಬ್‌ಗಳ ತಾಯಿ) ಎಂಬ ಅಡ್ಡ ಹೆಸರಿನಿಂದ ಕರೆಯಲಾಗುವ ಬಾಂಬನ್ನು ಅಮೆರಿಕ ಸೇನೆಯು ಉದುರಿಸಿತ್ತು.

ಸುಮಾರು 11,000 ಕೆಜಿ ತೂಕದ ಬಾಂಬ್ ಐಸಿಸ್‌ನ ಬೆನ್ನೆಲುಬನ್ನು ಪರಿಣಾಮಕಾರಿಯಾಗಿ ತುಂಡರಿಸಿದೆ ಎಂಬುದಾಗಿ ಅಮೆರಿಕದ ಸೇನಾಧಿಕಾರಿಗಳು ಹೇಳಿದ್ದಾರೆ.

ಆದಾಗ್ಯೂ, ಈ ಬಾಂಬ್ ಬಳಕೆ ‘‘ಅಫ್ಘಾನ್ ಜನತೆಯ ಮೇಲೆ ನಡೆಸಲಾದ ಭೀಕರ ದೌರ್ಜನ್ಯವಾಗಿದೆ’’ ಎಂಬುದಾಗಿ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಝಾಯಿ ಹೇಳಿದ್ದಾರೆ.90ಕ್ಕಿಂತಲೂ ಹೆಚ್ಚಿನ ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದು ಅಫ್ಘಾನ್ ಸರಕಾರ ಅಂದಾಜಿಸಿದೆ. ದಾಳಿಯಲ್ಲಿ ಯಾವುದೇ ನಾಗರಿಕರು ಸತ್ತಿಲ್ಲ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News