ಎ.28ರಿಂದ 30: ಬೆಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಸಾವಯವ- ಸಿರಿಧಾನ್ಯಗಳ ಮೇಳ
ಮಂಗಳೂರು, ಎ.22: ಸಾವಯವ ಹಾಗೂ ಸಿರಿಧಾನ್ಯಗಳ ಉಪಯೋಗದ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಲು ಮತ್ತು ಉತ್ತಮ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಎ.28ರಿಂದ 30ರವರೆಗೆ ರಾಷ್ಟ್ರ ಮಟ್ಟದ ಸಾವಯವ ಹಾಗೂ ಸಿರಿಧಾನ್ಯಗಳ ವಾಣಿಜ್ಯ ಮೇಳವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಈ ಮೇಳದಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಈವರೆಗೆ 18 ಮಂದಿ ಕೃಷಿಕರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ರಾಜ್ಯ ಮಟ್ಟದ ಸಾವಯವ ಕೃಷಿ ಉತ್ಪನ್ನ ಮಟ್ಟದ ಸಮಿತಿಯ ಅಧ್ಯಕ್ಷ ಸೋಮಶೇಖರ್ ಮಾಹಿತಿ ನೀಡಿದರು. ದೇಶದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಈ ರಾಷ್ಟ್ರ ಮಟ್ಟದ ಮೇಳ ನಡೆಯುತ್ತಿದೆ. ಮೇಳದಲ್ಲಿ ವಿವಿಧ ಸಾವಯವ ಉತ್ಪನ್ನಗಳು, ಸಿರಿ ಧಾನ್ಯಗಳು ಹಾಗೂ ಪರಿಸರ ಸ್ನೇಹಿ ಉತ್ಪನ್ನಗಳ ವಸ್ತು ಪ್ರದರ್ಶನ, ಉತ್ಪಾದಕರು ಮತ್ತು ಮಾರುಕಟ್ಟೆದಾರರ ಮುಖಾಮುಖಿ ಭೇಟಿ, ಮಾರುಕಟ್ಟೆ, ವೌಲ್ಯವರ್ಧನೆ ಹಾಗೂ ಸಂರಕ್ಷಣೆ ಬಗ್ಗೆ ಎ . 28 ಮತ್ತು 29ರಂದು ಆಂಗ್ಲ ಭಾಷೆಯಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
ಇದೇ ವೇಳೆ ಕನ್ನಡ ಭಾಷೆಯಲ್ಲಿಯೂ ರೈತರ ಕಾರ್ಯಾಗಾರ ನಡೆಯಲಿದೆ. ದ.ಕ., ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ನಿಯಮಿತ ಮತ್ತು ದ.ಕ. ಕೃಷಿ ಇಲಾಖೆಯ ಸಹಯೋಗದಲ್ಲಿ ರೈತರ ಕಾರ್ಯಾಗಾರಕ್ಕೆ 70 ರೈತರು ರಾಷ್ಟ್ರೀಯ ಸಮ್ಮೇಳನಕ್ಕೆ 5 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಮೇಳದಲ್ಲಿ ಪ್ರದರ್ಶನ ಮಳಿಗೆಗಳನು ತೆರೆಯಲಾಗುತ್ತಿದ್ದು, ಒಕ್ಕೂಟದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸೋಮಶೇಖರ್ ತಿಳಿಸಿದರು.
ಈ ಮೇಳಕ್ಕಾಗಿ ಕಳೆದ ಆರು ತಿಂಗಳಿನಿಂದ ಪೂರ್ವಭಾವಿ ತಯಾರಿ ನಡೆಸಲಾಗಿದೆ. ರಾಜ್ಯದ ಒಟ್ಟು 14 ಫೆಡರೇಶನ್‌ಗಳ ಸಹಕಾರದಲ್ಲಿ ಈ ಮೇಳವನ್ನು ಆಯೋಜಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನಷ್ಟು ಸಾವಯವ ಕೃಷಿಗೆ ರೈತರು ಒತ್ತು ನೀಡಬೇಕಾಗಿದೆ ಎಂದು ಅವರು ಹೇಳಿದರು.
ಸುದ್ದಿಅಗೋಷ್ಠಿಯಲ್ಲಿ ದ.ಕ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ಕೆಂಪೇಗೌಡ, ದ.ಕ. ಜಿಲ್ಲಾ ಸಾವಯವ ಕೃಷಿಕರ ಮಹಾಮಂಡಲದ ನಿರ್ದೇಶಕರಾದ ಪ್ರಭಾಕರ ಮಯ್ಯ, ಪ್ರಶಾಂತ್ ಗಟ್ಟಿ, ವಿಕ್ಟರ್ ರಾಡ್ರಿಗಸ್, ದೇವಿದಾಸ್ ರೈ ಉಪಸ್ಥಿತರಿದ್ದರು.