×
Ad

ಪ್ರತಿಭಟನಾನಿರತ ತಮಿಳುನಾಡು ರೈತರಿಂದ ಮೂತ್ರ ಸೇವನೆ

Update: 2017-04-22 15:45 IST

 ಹೊಸದಿಲ್ಲಿ,ಎ.22: ಕಳೆದ 39 ದಿನಗಳಿಂದಲೂ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತರಾಗಿ ಸಾಲ ಮನ್ನಾ, ಬೆಳೆನಷ್ಟ ಪರಿಹಾರ ಮತ್ತು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಂಬಲ ಬೆಲೆಗಾಗಿ ಆಗ್ರಹಿಸುತ್ತಿರುವ ತಮಿಳುನಾಡಿನ ರೈತರು ಶನಿವಾರ ಮೂತ್ರ ಸೇವಿಸಿ ತಮ್ಮ ಬವಣೆಗಳತ್ತ ಸರಕಾರದ ಗಮನ ಸೆಳೆಯುವ ಇನ್ನೊಂದು ಹತಾಶ ಯತ್ನವನ್ನು ಮಾಡಿದ್ದಾರೆ.

 ತಮ್ಮ ಪ್ರತಿಭಟನೆ ಸಂದರ್ಭ ಸರಕಾರದ ಗಮನ ಸೆಳೆಯಲು ಈ ರೈತರು ತಲೆ ಮತ್ತು ಮೀಸೆಯನ್ನು ಅರ್ಧ ಬೋಳಿಸಿಕೊಂಡಿದ್ದಾರೆ, ಇಲಿ ಮತ್ತು ಹಾವುಗಳನ್ನು ಬಾಯಿಯಲ್ಲಿ ಇಟ್ಟುಕೊಂಡಿದ್ದಾರೆ, ಅಣಕು ಶವಯಾತ್ರೆಗಳನ್ನು ನಡೆಸಿದ್ದಾರೆ, ತಮ್ಮನ್ನೇ ತಾವು ಥಳಿಸಿ ಕೊಂಡಿದ್ದಾರೆ, ಸಾಲದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ತಲೆಬುರುಡೆ ಗಳನ್ನು ತಂದು ಪ್ರದರ್ಶಿಸಿದ್ದಾರೆ. ಆದರೆ ಸರಕಾರ ಮಾತ್ರ ಏನೂ ಆಗಿಲ್ಲವೇನೋ ಎಂಬಂತೆ ನಿರ್ಲಿಪ್ತವಾಗಿದೆ.

 ಶನಿವಾರ ರೈತರ ಮುಷ್ಕರ 40ನೇ ದಿನವನ್ನು ಪ್ರವೇಶಿಸಿದ್ದು, ತಮ್ಮನ್ನು ತಡೆಯುವ ಪೊಲೀಸರ ಪ್ರಯತ್ನವನ್ನು ವಿಫಲವಾಗಿಸಿ ಮೂತ್ರ ಸೇವನೆಯನ್ನು ಮಾಡಿದ್ದಾರೆ.

ಕೇಂದ್ರ ಸರಕಾರವು ನಮಗೆ ನೀರು ನೀಡುತ್ತಿಲ್ಲ, ಹೀಗಾಗಿ ಮೂತ್ರ ಕುಡಿಯುತ್ತಿದ್ದೇವೆ ಎಂದು ಪ್ರತಿಭಟನಾಕಾರರ ನಾಯಕ ಪಿ.ಅಯ್ಯಿಕುನ್ನು ತಿಳಿಸಿದರು.

ಇನ್ನೊಂದು ದಿನದೊಳಗೆ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲು ಕೇಂದ್ರವು ವಿಫಲಗೊಂಡರೆ ತಾವು ಮೂತ್ರ ಸೇವನೆ ಮಾಡುವುದಾಗಿ ಪ್ರತಿಭಟನಾಕಾರರು ಶುಕ್ರವಾರ ಘೋಷಿಸಿದ್ದರು.

ಎ.10ರಂದು ಈ ರೈತರು ಪ್ರಧಾನಿ ಕಚೇರಿಯೆದುರು ಅರೆಬೆತ್ತಲೆಯಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News