ಇಫ್ತಿಕಾರ್ ಅಲಿ ಬಿಜೆಪಿ ಸೇರ್ಪಡೆ ಸುದ್ದಿ ಸುಳ್ಳು: ಯು.ಟಿ.ಖಾದರ್
ಮಂಗಳೂರು, ಎ.22: ತನ್ನ ಸಹೋದರ ಯು.ಟಿ.ಇಫ್ತಿಕಾರ್ ಅಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂಬುದು ಶುದ್ಧ ಸುಳ್ಳು ಎಂದು ಸಚಿವ ಖಾದರ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಸಹಿತ ಕೆಲವು ಮಾಧ್ಯಮಗಳಲ್ಲಿ ಇಫ್ತಿಕಾರ್ ಅಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವರದಿಯ ಹಿನ್ನಲೆಯಲ್ಲಿ ಶನಿವಾರ ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಯು.ಟಿ.ಖಾದರ್, ನಮ್ಮ (ಯು.ಟಿ.ಫರೀದ್) ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯುಳ್ಳ ಕುಟುಂಬವಾಗಿದೆ. ಯಾವ ಕಾರಣಕ್ಕೂ ಈ ಕುಟುಂಬದ ಯಾವೊಬ್ಬ ಸದಸ್ಯ ಕೂಡ ಕಾಂಗ್ರೆಸ್ ತ್ಯಜಿಸಿ ಇತರ ಯಾವ ಪಕ್ಷಕ್ಕೂ ಸೇರ್ಪಡೆಗೊಳ್ಳುವ ಪ್ರಶ್ನೆಯೇ ಇಲ್ಲ. ಇಫ್ತಿಕಾರ್ ಅಲಿ ಬಿಜೆಪಿ ಸೇರುತ್ತಾರೆ ಎಂಬುದು ಶುದ್ಧ ಸುಳ್ಳು. ಹೀಗೆ ಹೇಳಿ ಗೊಂದಲ ಸೃಷ್ಟಿಸುತ್ತಿರುವುದರಿಂದ ಇವರಿಗೆ ಏನು ಲಾಭ ಎಂದು ಗೊತ್ತಾಗುತ್ತಿಲ್ಲ ಎಂದರು.
* ಕೆಂಪು ದೀಪ ತೆರವು ಸರಕಾರಕ್ಕೆ ಬಿಟ್ಟ ವಿಷಯ:
ಪ್ರಧಾನಿ ನರೇಂದ್ರ ಮೋದಿ ವಿಐಪಿ ಗಣ್ಯರಿಗೆ ‘ಕೆಂಪು ದೀಪ’ ಅಳವಡಿಕೆಗೆ ಸಂಬಂಧಿಸಿ ನಿಯಮಾವಳಿ ರೂಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ.ಖಾದರ್, ಕೆಂಪು ದೀಪವನ್ನು ನಾನು ನನ್ನ ತಲೆಯಲ್ಲಿಟ್ಟುಕೊಂಡು ಓಡಾಡುತ್ತಿಲ್ಲ. ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸರಕಾರ ಇದನ್ನು ನೀಡಿದೆ. ಕಿತ್ತುಕೊಳ್ಳುವುದಾದರೆ ಸರಕಾರವೇ ಕಿತ್ತುಕೊಳ್ಳಲಿದೆ. ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರೆ ಅಥವಾ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡರೆ ಅದಕ್ಕೆ ಬದ್ಧರಾಗಿರುವುದಾಗಿ ಹೇಳಿದರು.
ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತನ್ನ ಸರಕಾರಿ ಕಾರಿನಲ್ಲಿ ಅಳವಡಿಸಲಾದ ಕೆಂಪು ದೀಪ ತೆರವುಗೊಳಿಸಿದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಖಾದರ್, ಅದು ಅವರ ವೈಯಕ್ತಿಕ ವಿಚಾರ ಎಂದರು.
*ಪಡಿತರ ಚೀಟಿ ವಿತರಣೆಗೆ ಕ್ರಮ: ಅರ್ಜಿ ಸಲ್ಲಿಸಿ ಮೂರು ತಿಂಗಳಾದರೂ ಕೂಡ ಪಡಿತರ ಚೀಟಿ ಸಿಗದೆ ಸಮಸ್ಯೆ ವೃದ್ಧಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಯು.ಟಿ.ಖಾದರ್ ವಾರದೊಳಗೆ ಈ ಬಗ್ಗೆ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ರೇಷನ್ ಕಾರ್ಡ್ ಸಮಸ್ಯೆ ಇಂದು ನಿನ್ನೆಯದಲ್ಲ. ಕಳೆದ 20 ವರ್ಷದಿಂದ ಈ ಸಮಸ್ಯೆ ಇದೆ. ತಾನು ಆಹಾರ ಇಲಾಖೆಯ ಸಚಿವನಾದ ಬೆನ್ನಿಗೆ ರೇಷನ್ ಕಾರ್ಡ್ ಪಡೆಯಲು ಸರಳ ನಿಯಮಗಳನ್ನು ಅಳವಡಿಸಿದೆ. ಈ ಕ್ರಮವನ್ನು ಅಳವಡಿಸಿದ ರಾಜ್ಯಗಳ ಪೈಕಿ ಕರ್ನಾಟಕವು ದೇಶದಲ್ಲೇ ಪ್ರಥಮವಾಗಿದೆ. ಆದರೆ ಕಂದಾಯ ಇಲಾಖೆಯ ಅಸಹಕಾರದಿಂದ ರೇಷನ್ ಕಾರ್ಡ್‌ಗಳನ್ನು ಸಕಾಲಕ್ಕೆ ತಲುಪಿಸಲು ಸಾಧ್ಯವಾಗಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ವಾರದೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಖಾದರ್ ಹೇಳಿದರು.