ಕುತ್ತಾರು ಚೂರಿ ಇರಿತ ಪ್ರಕರಣ: ಓರ್ವ ಗಾಯಾಳು ಮೃತ್ಯು
ಕೊಣಾಜೆ, ಎ.22: ಇಂದು ಬೆಳಗ್ಗೆ ಕುತ್ತಾರಿನಲ್ಲಿ ಮೂವರು ಹೊಟೇಲ್ ಕಾರ್ಮಿಕರ ನಡೆದ ಚೂರಿ ಇರಿತ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಓರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತರನ್ನು ಬಿಹಾರ ಮೂಲದ ನಿತೇಶ್ ಎಂದು ಗುರುತಿಸಲಾಗಿದೆ.
ಇನ್ನೋರ್ವ ಗಾಯಾಳು ಪ್ರದೀಪ್ ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೂರಿ ಇರಿತದ ಆರೋಪಿ ಒಡಿಶಾ ಮೂಲದ ತಾಹಿರ್(ಆರಿಫ್ ಖಾನ್) ತಲೆಮರೆಸಿಕೊಂಡಿದ್ದಾನೆ.
ಕುತ್ತಾರು ಶಾಂತಿ ಬಾಗ್ ಸಮೀಪದ ಹೊಟೇಲ್ವೊಂದರಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ನಡೆದಿತ್ತು. ಇಲ್ಲಿನ ಹೊಟೇಲ್‌ವೊಂದರಲ್ಲಿ ಕಾರ್ಮಿಕರಾಗಿದ್ದ ಉತ್ತರ ಭಾರತ ಮೂಲದವರಾದ ನಿತೇಶ್, ಪ್ರದೀಪ್ ಮತ್ತು ತಾಹಿರ್ ನಡುವೆ ಮಾರಾಮಾರಿ ಹೊಡೆದಾಟ ನಡೆದಿತ್ತು. ಈ ವೇಳೆ ನಿತೇಶ್ ಹಾಗೂ ಪ್ರದೀಪ್ ಅವರ ಮೇಲೆ ಆರೋಪಿ ತಾಹಿರ್ ಚೂರಿಯಿಂದ ಇರಿದಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಇರಿತಕ್ಕೊಳಗಾದ ನಿತೇಶ್ ಸ್ಥಿತಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ.