ದೇಶದಲ್ಲಿ 1,100 ಜನೌಷಧಿ ಕೇಂದ್ರ ಆರಂಭ: ಸಚಿವ ಅನಂತಕುಮಾರ್
ಮಂಗಳೂರು, ಎ.22: ದೇಶದಲ್ಲಿ ಬಡಜನರಿಗೆ ಮಿತದರದಲ್ಲಿ ಜನೌಷಧಿ ಕೇಂದ್ರಗಳ ಮೂಲಕ ಔಷಧಿ ನೀಡುತ್ತಿರುವುದು ವೈದ್ಯಕೀಯ ಸೇವಾ ರಂಗದಲ್ಲಿ ಸರಕಾರದ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇದುವರೆಗೆ ದೇಶಾದ್ಯಂತ ಒಟ್ಟು 1,100 ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಎಚ್.ಎನ್.ಅನಂತಕುಮಾರ್ ಹೇಳಿದ್ದಾರೆ.
ಗುರುಪುರ ಮಾತೃ ಭೂಮಿ ಸೌಹಾರ್ದ ಸಹಕಾರಿ ನಿಯಮಿತ, ದಿಲ್ಲಿಯ ಬಿಪಿಪಿಐ ಸಹಯೋಗದೊಂದಿಗೆ ನಗರದ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕರ್ನಾಟದಲ್ಲಿ 200 ಕೇಂದ್ರಗಳನ್ನು ಆರಂಭಿಸುವ ಬಗ್ಗೆ ಇಲ್ಲಿನ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100 ಜನೌಷಧಿ ಕೇಂದ್ರಗಳನ್ನು ಗುರುಪುರ ಮಾತೃ ಭೂಮಿ ಸೌಹಾರ್ದ ಸಹಕಾರಿ ನಿಯಮಿತದ ಮೂಲಕ ಆರಂಭಿಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿರುವುದಾಗಿ ಅವರು ತಿಳಿಸಿದರು.
ಜನೌಷಧಿ ಕೇಂದ್ರಗಳಲ್ಲಿ 650 ಔಷಧಿಗಳು, 150 ಆರೋಗ್ಯ ವರ್ಧಕಗಳನ್ನು ಶೇ.70ರಷ್ಟು ರೀಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಈ ಔಷಧಿಗಳನ್ನು ಕಡ್ಡಾಯವಾಗಿ ಬಳಸುವಂತೆ ಇಂಡಿಯನ್ ಮೆಡಿಕಲ್ ಕೌನ್ಸಿಲ್‌ಗೆ ಸೂಚನೆ ನೀಡಲು ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಕಾನೂನು ತಿದ್ದುಪಡಿಗೆ ಸರಕಾರ ಸಿದ್ಧವಿದೆ. ದೇಶದಲ್ಲಿ ಉಜ್ಜಲ ಯೋಜನೆಯ ಮೂಲಕ ಇದುವರೆಗೆ 2 ಕೋಟಿ ಜನರಿಗೆ ಉಚಿತ ಅಡುಗೆ ಅನಿಲದ ಸಂಪರ್ಕ ನೀಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 3 ಕೋಟಿ ಜನರಿಗೆ ಈ ಯೋಜನೆಯ ಮೂಲಕ ಅನಿಲ ಸಂಪರ್ಕ ನೀಡಲಾಗುವುದು ಎಂದು ಅನಂತಕುಮಾರ್ ತಿಳಿಸಿದ್ದಾರೆ.
ಎಂಆರ್‌ಪಿಎಲ್‌ನಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಮಾಡಲು ಸರಕಾರ ಸಿದ್ಧವಿದೆ. ಇದರಿಂದ ಸುಮಾರು 30 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ಸಚಿವರು ವಿವರಿಸಿದರು.
ಭಾರತದಲ್ಲಿ 2 ಲಕ್ಷ ಕೋಟಿ ರೂ. ವೌಲ್ಯದ ಔಷಧಿ ತಯಾರಿ:
ಭಾರತದಲ್ಲಿ ಪ್ರತಿವರ್ಷ 2 ಲಕ್ಷ ಕೋ.ರೂ ವೌಲ್ಯದ ಔಷಧಿಗಳು ತಯಾರಿಸಲ್ಪಡುತ್ತವೆ. ಈ ಪೈಕಿ ಸುಮಾರು 216 ದೇಶಗಳಿಗೆ ಒಂದು ಲಕ್ಷ ಕೋ.ರೂ.ಗಳ ಔಷಧಿ ರಫ್ತಾಗುತ್ತಿದೆ.ಒಂದು ಲಕ್ಷ ಕೋ.ರೂ. ಔಷಧಿ ದೇಶದಲ್ಲಿ ಬಳಕೆಯಾಗುತ್ತಿದೆ ಎಂದು ಅನಂತಕುಮಾರ್ ತಿಳಿಸಿದ್ದಾರೆ.
ನೀರು ಮತ್ತು ನೈರ್ಮಲ್ಯ ರಾಜ್ಯ ಖಾತೆ ಸಚಿವ ರಮೇಶ್ ಸಿ.ಜಿಗಜಿಣಗಿ ಮಾತನಾಡಿ, ಜನೌಷಧಿ ಕೇಂದ್ರದ ಔಷಧಿ ಎಲ್ಲರಿ ಅರ್ಹರಿಗೆ ದೊರೆಯುವಂತಾಗಲು ಸೂಕ್ತವಾದ ಕಾನೂನು ತಿದ್ದುಪಡಿಯ ಅಗತ್ಯವಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ದ.ಕ. ಜಿಲ್ಲೆಯಲ್ಲಿ 11 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ. ಒಂದು ಈಗಾಗಲೇ ಉದ್ಘಾಟನೆಗೊಂಡಿದೆ. ಜೊತೆಗೆ ಕೃಷಿ ಸಿಂಚನ ಯೋಜನೆಯಡಿ 5,500 ಕೋ.ರೂ. ಮಂಜೂರು ಮಾಡಲು ಕಾರಣರಾದ ಸಚಿವ ರಮೇಶ್ ಜಿಗಜಿಣಗಿಯವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ನುಡಿದರು.
ಸಮಾರಂಭದಲ್ಲಿ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್, ಬಿಪಿಪಿಐ ಉಪನಿರ್ದೇಶಕ ರೋಹಿತ್ ಮೆಹರಾ, ಮಾತೃ ಭೂಮಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ದೇವಸ್ಯ ಮೊದಲಾದವರು ಉಪಸ್ಥಿತರಿದ್ದರು.