ಬಾಲಕಿಯರ ಜನನಾಂಗ ವಿರೂಪ : ಭಾರತ ಮೂಲಕ ವೈದ್ಯ, ಪತ್ನಿ ಬಂಧನ

Update: 2017-04-22 14:13 GMT

ನ್ಯೂಯಾರ್ಕ್, ಎ. 22: ಅಪ್ರಾಪ್ತ ಬಾಲಕಿಯರ ಜನನಾಂಗಗಳನ್ನು ವಿರೂಪಗೊಳಿಸುವ ಶಸ್ತ್ರಚಿಕಿತ್ಸೆ ನಡೆಸಲು ಭಾರತ ಮೂಲದ ವೈದ್ಯೆಯೊಬ್ಬರಿಗೆ ಸಹಾಯ ಮಾಡಿದ ಆರೋಪದಲ್ಲಿ ಭಾರತ ಮೂಲದ ಇನ್ನೋರ್ವ ವೈದ್ಯ ಹಾಗೂ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಾಲಕಿಯರ ಜನನಾಂಗವನ್ನು ವಿರೂಪಗೊಳಿಸುವುದನ್ನು ಅಮೆರಿಕದಲ್ಲಿ ನಿಷೇಧಿಸಲಾಗಿದೆ.

ವಿಶಿಗನ್ ರಾಜ್ಯದ ವೈದ್ಯ ಫಕ್ರುದ್ದೀನ್ ಅತ್ತಾರ್ (53) ಮತ್ತು ಅವರ ಪತ್ನಿ ಫರೀದಾ ಅತ್ತಾರ್ (50) ಅವರನ್ನು ಬಂಧಿಸಲಾಗಿದೆ. ಲಿವೋನಿಯದಲ್ಲಿ ಫಕ್ರುದ್ದೀನ್‌ಗೆ ಸೇರಿದ ಕ್ಲಿನಿಕ್‌ನಲ್ಲಿ ಬಾಲಕಿಯರ ಜನನಾಂಗಗಳನ್ನು ವಿರೂಪಗೊಳಿಸುವುದಕ್ಕಾಗಿ ಜುಮಾನಾ ನಗರ್‌ವಾಲಾ (44) ಎಂಬವರೊಂದಿಗೆ ಸಂಚು ರೂಪಿಸಿದ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದೆ.

ಅತ್ತಾರ್ ದಂಪತಿಯನ್ನು ಶುಕ್ರವಾರ ಬಂಧಿಸಿದರೆ, ನಗರ್‌ವಾಲಾರನ್ನು ಕಳೆದ ವಾರ ಬಂಧಿಸಲಾಗಿತ್ತು. ಆರರಿಂದ ಎಂಟು ವರ್ಷಗಳ ಬಾಲಕಿಯರಿಗೆ ಈ ಶಸ್ತ್ರಚಿಕಿತ್ಸೆಯನ್ನು ಮಾಡಿದ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದೆ.ಫಕ್ರುದ್ದೀನ್ ಗುಜರಾತ್‌ನ ಬರೋಡ ವೈದ್ಯಕೀಯ ಕಾಲೇಜಿನಿಂದ 1988ರಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ.

ಮಿಶಿಗನ್‌ನಲ್ಲಿರುವ ಫಕ್ರುದ್ದೀನ್ ಒಡೆತನದ ಬುರ್ಹಾನಿ ಮೆಡಿಕಲ್ ಕ್ಲಿನಿಕ್‌ನಲ್ಲಿ ನಗರ್‌ವಾಲಾ ಅಪ್ರಾಪ್ತ ಬಾಲಕಿಯರಿಗೆ ಈ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.ಈ ಕ್ಲಿನಿಕ್‌ನ ಉಸ್ತುವಾರಿಯನ್ನು ಫಕ್ರುದ್ದೀನ್‌ರ ಪತ್ನಿ ನೋಡಿಕೊಳ್ಳುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News