×
Ad

ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ವಿಚಾರ ಸಂಕಿರಣಕ್ಕೆ ಚಾಲನೆ

Update: 2017-04-22 20:24 IST

ಬ್ರಹ್ಮಾವರ, ಎ.22: ಕೃಷಿ ಲಾಭದಾಯಕ ಅಲ್ಲ.ಅದರಿಂದ ಪ್ರಯೋಜನವಿಲ್ಲ ಎಂಬುದು ಸುಳ್ಳು. ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ದೇಶಕ್ಕೆ ಸಲ್ಲಿಸುವ ದೊಡ್ಡ ಸೇವೆ. ಯುವ ಜನಾಂಗ ಕೃಷಿಯತ್ತ ಆಕರ್ಷಿತಗೊಳ್ಳುವಂತೆ ಮಾಡಿ, ಅವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‌ನ ಆಡಳಿ ಟ್ರಸ್ಟಿ ಕೆ.ಎಂ.ಉಡುಪ ಹೇಳಿದ್ದಾರೆ.

ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಕೇಂದ್ರದಲ್ಲಿ ಶನಿವಾರ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಡಿಪ್ಲೊಮಾ ಮಹಾವಿದ್ಯಾಲಯ, ಬ್ರಹ್ಮಾವರ ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ, ಕೃಷಿ ಇಲಾಖೆ, ಮಂಗಳೂರಿನ ಟ್ರಾನ್ಸ್‌ವರ್ಲ್ಡ್ ಫರ್ಟಿಕೆಮ್ ಮತ್ತು ಹೇರೂರು ನಟರಾಜ ರೈತ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ‘ಹುಳಿ ಮಣ್ಣಿನಲ್ಲಿ ಶಿಲಾ ರಂಜಕದ ಪಾತ್ರ ಮತ್ತು ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ’ ವಿಷಯದ ಕುರಿತು ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಸೇವಿಸುವ ಅನ್ನದಿಂದ ಹಿಡಿದು ಪ್ರತಿಯೊಂದುಆಹಾರ ಕೃಷಿಯಿಂದಲೇ ಬರುವುದೇ ಹೊರತು ಯಂತ್ರದಿಂದ ಅಲ್ಲ ಎನ್ನುವುದನ್ನು ಇಂದಿನ ಯುವ ಜನಾಂಗಕ್ಕೆ ತಿಳಿಸಿ ಹೇಳುವ ಕೆಲಸವಾಗಬೇಕು ಎಂದು ಕೃಷಿತಜ್ಞರೂ ಆಗಿರುವ ಕೆ.ಎಂ.ಉಡುಪ ಹೇಳಿದರು.

ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಎಂ. ಹನುಮಂತಪ್ಪಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿವಿಯ ವಿದ್ಯಾರ್ಥಿ ಕಲ್ಯಾಣ ವಿಭಾಗದ ಮುಖ್ಯಸ್ಥ ಡಾ.ವೈ.ವಿಶ್ವನಾಥ ಶೆಟ್ಟಿ ಸಮಗ್ರ ಕೃಷಿ ಘಟಕ, ಹೈಡ್ರೋಫೋನಿಕ್ಸ್ ಮೇವು ಉತ್ಪಾದನಾ ಘಟಕ, ಮೀನು, ಹಂದಿ, ನಾಟಿ ಕೋಳಿ ಸಾಾಣಿಕಾ ಘಟಕಗಳನ್ನು ಉದ್ಘಾಟಿಸಿದರು.

ಮಂಗಳೂರು ಟ್ರಾನ್ಸ್‌ವರ್ಲ್ಡ್ ಪರ್ಟಿಕಮ್‌ನ ಕೆ.ವಿ.ಕಾರಂತ್ ಹುಳಿ ಮಣ್ಣಿ ನಲ್ಲಿ ಶಿಲಾ ರಂಜಕದ ಮಹತ್ವ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಪ್ರಗತಿಪರ ಕೃಷಿಕರಾದ ಸತೀಶ್ ಕುಮಾರ್ ಶೆಟ್ಟಿ ಯಡ್ತಾಡಿ, ಸಹವಿಸ್ತರಣಾ ನಿರ್ದೇಶಕ ಡಾ.ಎಸ್.ಯು ಪಾಟೀಲ್, ಕೃಷಿ ಕೇಂದ್ರದ ಕುಚೇಲಯ್ಯ, ಬಾಡಿಗೆ ಆಧಾರಿತ ಸೇವಾ ಕೇಂದ್ರದ ವಿಜ್ಞಾನಿ ಡಾ.ಶಂಕರ್ ಮಾಹಿತಿ ನೀಡಿದರು.

ಸಹಪ್ರಾಧ್ಯಾಪಕ ಡಾ.ಕೆ.ವಿ ಸುಧೀರ್ ಕಾಮತ್ ಸ್ವಾಗತಿಸಿದರು. ಕೆ.ವಿ.ಕೆಯ ಮುಖ್ಯಸ್ಥ ಡಾ.ಧನಂಜಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News