ದಡ್ಡಲಕಾಡು ವಿದ್ಯಾದೇಗುಲವನ್ನು ಉದ್ಘಾಟನೆ

Update: 2017-04-22 15:07 GMT

ಬಂಟ್ವಾಳ, ಎ. 22: ಇಂದು ವಿಶ್ವ ಭೂದಿನ ಆಚರಿಸುತ್ತಿರುವ ಸುಸಂದರ್ಭದಲ್ಲೇ ಶಾಲೆಯನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸುವ ಮೂಲಕ ದುರ್ಗಾ ಫ್ರೆಂಡ್ ಕ್ಲಬ್ ಈ ಮಣ್ಣಿನ ಋಣ ತೀರಿಸಿದೆ ಎಂದು ಕೇಂದ್ರದ ರಾಸಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಹೇಳಿದರು.

ಮೂಡನಡು ಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗ ಫ್ರೆಂಡ್ಸ್ ಕ್ಲಬ್ ಇದರ ದಶಮಾನೋತ್ಸವದ ಅಂಗವಾಗಿ ಶನಿವಾರ ಸಂಜೆ ದಡ್ಡಲಕಾಡು ವಿದ್ಯಾದೇಗುಲವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವು ಯಾವುದೇ ಕಾನ್ವೆಂಟ್ ಖಾಸಗಿ ಶಾಲೆಗಳಿಗೆ ಹೋಗಿಲ್ಲ. ಸೆಗಣಿ ಸಾರಿಸಿದ ಶಾಲೆಗೆ ಹೋಗಿ ಇಂದು ಜನ ಸೇವೆ ಮಾಡುವ ಯೋಗ್ಯತೆ ಪಡೆದಿದ್ದೇವೆ. ಸರಕಾರ ಎಷ್ಟೇ ಮಾಡಿದರೂ ಕೂಡ ಸಮಾಜ ಎದ್ದು ನಿಲ್ಲದೆ ಇದ್ದರೆ ಶಿಕ್ಷಣ ವ್ಯವಸ್ಥೆ ಸುಧಾರಣೆ ಮಾಡಲು ಸಾಧ್ಯವಿಲ್ಲ. ಶಾಲೆಗೆ ಬೇಕಾದ ಆರ್ಥಿಕ ನೆರವನ್ನು ಸರಕಾರ ಹಾಗೂ ವೈಯಕ್ತಿಕವಾಗಿ ನೀಡುವ ಭರವಸೆ ನೀಡಿದರು.

ಸರಕಾರಿ ಶಾಲೆಗಳ ವಿಸ್ತತ ಅಧ್ಯಯನ ವರದಿ ತಯಾರಿಸಿ ಕೊಟ್ಟರೆ ಅದರ ಬಗ್ಗೆ ರಾಜ್ಯ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇವೆ. ದೇಶದ ಪ್ರಧಾನ ಮಂತ್ರಿಗೂ ಕೂಡ ನೀಡಿ ಅವರ ಗಮನ ಸೆಳೆಯುತ್ತೇವೆ. ಕೇಂದ್ರದ ಶಿಕ್ಷಣ ಸಚಿವ ಪ್ರಕಾಶ್ ಜಾವ್ಡೇಕಾರ್ ಅವರನ್ನು ದಡ್ಡಲಕಾಡು ಶಾಲೆಗೆ ಕರೆ ತರುತ್ತೇವೆ. ಬಡವರಿಗೆ ಶಿಕ್ಷಣ ನೀಡಬೇಕು ಎನ್ನುವ ನಾರಾಯಣ ಗುರುಗಳ ಮಾತನಂತೆ ಈ ಶಾಲೆ ನಿರ್ಮಾಣಗೊಂಡಿರುವುದು ನನಗೂ ಪ್ರೇರಣೆ ನೀಡಿದೆ ಎಂದು ಅವರು ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಮಾತನಾಡಿ, ಉತ್ತರ ಕರ್ನಾಟಕದಲ್ಲೂ ಶಾಲೆಗಳ ಕೊರತೆ ಇತ್ತು. ತುಂಬಾ ಅಸ್ತವ್ಯಸ್ತವಾಗಿತ್ತು. ಅಂತಹ ಶಾಲೆಗಳಲ್ಲಿ ನಾವು ಶಿಕ್ಷಣ ಪಡೆದಿದದೇವೆ. ಸರಕಾರಿ ಶಾಲೆಯಲ್ಲಿ ಓದಿದರೆ ಮಕ್ಕಳು ದಡ್ಡರಾಗುತ್ತಾರೆ ಎನ್ನುವ ಭಾವನೆ ಪೋಷಕರಲ್ಲಿ ಇರಬಾರದು. ಪ್ರಕಾಶ್ ಅಂಚನ್ ಅಧ್ಭುತವಾದ ಕೆಲಸ ಮಾಡಿದ್ದಾರೆ. ಶಾಲೆಯ ಅಭಿವೃದ್ದಿಯ ದೃಷ್ಟಿಯಿಂದ ನೀವು ಕೇಳುವ ಸಹಕಾರಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇವೆ ಎಂದರು.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜಸ್ಥಾನದ ಮೋಹನ್ ಚೌದರಿ ಅನಿಸಿಕೆ ವ್ಯಕ್ತಪಡಿಸಿದರು. ಸಂಸದ ನಳೀನ್ ಕುಮಾರ್ ಕಟೀಲು, ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪಕೋಟ್ಯಾನ್, ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್, ಸ್ಥಾಪಕ ಶಿಕ್ಷಕ ಸಂಜೀವಗೌಡ, ಕೆನರಾ ಬ್ಯಾಂಕಿನ ಪ್ರಬಂಧಕ ಮನೋಹರ ನಾಯಕ್, ನಮ್ಮ ಕುಡ್ಲ ಚಾನೆಲ್‌ನ ನಿರ್ದೇಶಕ ಲೀಲಾಕ್ಷ ಕರ್ಕೇರಾ, ಪಂಜಿಕಲ್ಲು ಗ್ರಾ.ಪಂ.ಉಪಾಧ್ಯಕ್ಷ ಲಕ್ಷ್ಮೀನಾರಯಣ ಗೌಡ, ಸದಸ್ಯ ಕೇಶವ ಗೌಡ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪೂವಪ್ಪ ಮೆಂಡನ್, ಉದ್ಯಮಿ ಬಶೀರ್ ಅಹಮ್ಮದ್, ರೂಪಶ್ರೀ ಗಂಘಾಧರ್, ಸೋಮು ತಮಿಳುನಾಡು, ಕೃಷ್ಣಮೂರ್ತಿ ತಮಿಳುನಾಡು,

ರಾಜೇಶ್ ಕುಮಾರ್ ರಾಜಾಸ್ಥಾನ, ಇಂದರ್ ಸಿಂಗ್ ಠಾಕೂರು, ಶಾಲಾ ಮುಖ್ಯಶಿಕ್ಷಕ ಮೌರಿಸ್ ಡಿ’ಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು, ವಂದಿಸಿದರು ಪುರುಷೋತ್ತಮ ಅಂಚನ್ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News