ಕಣಂತೂರು: ನೂತನ ಕಾಂಕ್ರೀಟ್ ರಸ್ತೆಗೆ ಶಿಲಾನ್ಯಾಸ
ಕೊಣಾಜೆ,ಎ.22: ಬಾಳೆಪುಣಿ ಸಮೀಪದ ಶ್ರೀ ಕ್ಷೇತ್ರ ಕಣಂತೂರು ಭಂಡಾರ ಮನೆಗೆ ತೆರಳುವ ರಸ್ತೆಯ ಕಾಂಕ್ರೀಟಿಕರಣಕ್ಕೆ ಶನಿವಾರ ಶ್ರೀ ಕ್ಷೇತ್ರ ಕಣಂತೂರು ತೋಡಕುಕ್ಕಿನಾರ್ ದೈವಸ್ಥಾನದ ಆಡಳಿತ ಮೊಕ್ತೇಸರ ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿಯವರು ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಶ್ರೀ ಕೇತ್ರ ಕಣಂತೂರಿನ ಜಾತ್ರಾ ಮಹೋತ್ಸವವು ಮೇ 9ರಂದು ನಡೆಯಲಿದ್ದು ಇದಕ್ಕೆ ಮುಂಚಿತವಾಗಿಯೇ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಯು ಆರಂಭಗೊಂಡಿದ್ದು, ಅನುದಾನ ಬಿಡುಗಡೆಗೊಳಿಸಿದ ಲೋಕಸಭಾ ಸದಸ್ಯರಿಗೆ ಊರಿನ ಎಲ್ಲರ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಅವರು, ಸಂಸದರಿಗೆ ವರ್ಷಕ್ಕೆ ಬರುವುದು 5 ಕೋಟಿ ಅನುದಾನವಾದರೂ ನಮ್ಮ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು ಇತರ ಎಲ್ಲಾ ಮೂಲಗಳ ಅನುದಾನ ಜೋಡಿಸಿ ಮೂಲಭೂತ ಸೌಲಭ್ಯಗಳ ವಿಸ್ತರಣೆಗೆ ಗಮನಹರಿಸುತ್ತಿರುವುದು ಅವರನ್ನು ರಾಜ್ಯದಲ್ಲೇ ನಂಬರ್ ಒನ್ ಸ್ಥಾನಕೇರುವಂತೆ ಮಾಡಿದೆ ಎಂದರು.
ಬಾಳೆಪುಣಿ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯೆಯರಾದ ಉಷಾ, ಹರಿಣಾಕ್ಷಿ, ಮೊಕ್ತೇಸರರಾದ ಸುಬ್ರಹ್ಮಣ್ಯ ಭಟ್ ಬೆಳ್ಳೇರಿ, ಕೆ.ಐ,ಕೇಶವ ಭಟ್, ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ, ಬಾಳೆಪುಣಿ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ್ ಬೆಳ್ಳೇರಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹೇಶ್ ಚೌಟ, ದೇರಣ್ಣ ದೇವಾಡಿಗ, ಮೂಲ್ಯಣ್ಣ ದೇವಾಡಿಗ, ಗೋಪಾಲ, ಪ್ರವೀಣ್ ಆಳ್ವ, ಮುನೀರ್ ಮಾಸ್ಟರ್, ರತ್ನಾಕರ ರೈ, ಸೀತಾರಾಮ ಶೆಟ್ಟಿ, ಕಮಲಾಕ್ಷ ಗಟ್ಟಿ, ಲಕ್ಮಣ ಗಟ್ಟಿ, ಹೇಮಂತ್ ಶೆಟ್ಟಿ, ಜಯಂತ್ ಮೊದಲಾದವರು ಉಪಸ್ಥಿತರಿದ್ದರು.
ಜಗದೀಶ್ ಶೆಟ್ಟಿ ಕುವತ್ತಬೈಲ್ ಸ್ವಾಗತಿಸಿ, ನ್ಯಾಯವಾದಿ ಭಾಸ್ಕರ್ ವಂದಿಸಿದರು.