×
Ad

ದೇವಸ್ಥಾನಗಳಿಗೆ ಎಸ್ಸಿ-ಎಸ್ಟಿಗಳನ್ನು ಮೊಕ್ತೇಸರರನ್ನಾಗಿ ನೇಮಿಸದಿದ್ದರೆ ಪರಿಣಾಮ ನೆಟ್ಟಗಿರದು: ಎಚ್ಚರಿಕೆ

Update: 2017-04-23 19:55 IST

ಬಂಟ್ವಾಳ, ಎ. 23: "ನಾವೂ ನಿಮ್ಮವರೇ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳುತ್ತಾರೆ. ಸಮಾನತೆ ಎಂದರೆ ಒಟ್ಟಿಗೆ ಕುಳಿತುಕೊಳ್ಳುವುದಲ್ಲ. ಬೆಂಗರೆಯಿಂದ ಸುಬ್ರಹ್ಮಣ್ಯದವರೆಗೆ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಹಲವು ದೇವಸ್ಥಾನಗಳಿವೆ. ಯಾವ ದೇವಸ್ಥಾನಕ್ಕೂ ಜಿಲ್ಲಾಡಳಿತ ಎಸ್ಸಿ-ಎಸ್ಟಿಗಳನ್ನು ಮೊಕ್ತೇಸರರನ್ನಾಗಿ ನೇಮಿಸುತ್ತಿಲ್ಲ. ಜಿಲ್ಲಾಧಿಕಾರಿಯಿಂದಲೇ ಅಸಮಾನತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನಗಳಿಗೆ ಎಸ್ಸಿ, ಎಸ್ಟಿಗಳನ್ನು ಮೊಕ್ತೇಸರನನ್ನಾಗಿ ನೇಮಿಸದಿದ್ದರೆ ಪರಿಣಾಮ ಗಂಭೀರವಾದೀತು" ಎಂದು ಜನಾರ್ದನ ಚಂಡ್ತಿಮಾರ್ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆಯವರ ನೇತೃತ್ವದಲ್ಲಿ ರವಿವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ದೇವಸ್ಥಾನಗಳಿಗೆ ಮೊಕ್ತೇಸರರನ್ನಾಗಿ ಎಸ್ಸಿ-ಎಸ್ಟಿಗಳನ್ನು ನೇಮಿಸಲು ಒತ್ತಾಯಿಸಿದರು.

ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್ ಮಾತನಾಡಿ, ಬಂಟ್ವಾಳ ತಾಲೂಕಿನ ವಿವಿಧ ಭಾಗಗಳಲ್ಲಿ ಗಾಂಜಾ ಸೇವನೆಯಿಂದ ಅಪರಾಧ ಕೃತ್ಯ ನಡೆಸುವವರ ಸಂಖ್ಯೆ ಹೆಚ್ಚಾಗಿದೆ. ಪೊಲೀಸ್ ಠಾಣೆಯ ಸಮೀಪದ ನೆರೆ ವಿಮೋಚನಾ ರಸ್ತೆ, ಕೈಕುಂಜೆ ರೈಲ್ವೆ ಸ್ಟೇಶನ್ ಬಳಿ, ಬೆಂಜನಪದವು ಸಹಿತ ಪ್ರಮುಖ ಭಾಗಗಳಲ್ಲಿ ಮಾದಕ ದ್ರವ್ಯ ಸೇವಿಸುವ ಯುವಕರು ಕಾಣ ಸಿಗುತ್ತಿದ್ದಾರೆ. ಸಾರ್ವಜನಿಕರಿಗೆ ಈಗ ಕುಡುಕರ ಭಯವಿಲ್ಲ. ಆದರೆ ಹಗಲು-ರಾತ್ರಿ ಗಾಂಜಾ ಸೇವಿಸವವರ ಸಮಸ್ಯೆಯೇ ಜಾಸ್ತಿಯಾಗುತ್ತಿದೆ ಎಂದು ಗಮನ ಸೆಳೆದರು.

ನಮ್ಮ ಜಿಲ್ಲೆಯ ಎಲ್ಲೂ ಗಾಂಜಾ ಬೆಳೆಯಲಾಗುತ್ತಿಲ್ಲ. ಆದರೂ ಜಿಲ್ಲೆಯಲ್ಲಿ ಗಾಂಜಾ ಸಾಗಾಟ, ಸೇವನೆ ಭಾರೀ ದೊಡ್ಡ ಮಟ್ಟದಲ್ಲಿ ಕಾರ್ಯಾಚರಿಸುತ್ತಿದೆ. ಯುವಕರು ಅದರ ದಾಸರಾಗುತ್ತಿದ್ದಾರೆ. ಪೊಲೀಸರು ಗಾಂಜಾ ಸೇವಿಸುವವರನ್ನು ಮಾತ್ರ ಬಂಧಿಸಿದರೆ ಯಾವುದೇ ಪ್ರಯೋಜನವಿಲ್ಲ. ಜಿಲ್ಲೆಗೆ ಗಾಂಜಾ ಎಲ್ಲಿಂದ ಪೂರೈಕೆಯಾಗುತ್ತಿದೆ. ಅದರ ಮೂಲ ಯಾವುದು ಎಂಬುದನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಂಡಾಗ ಮಾತ್ರ ಗಾಂಜಾ ಮಾಫಿಯಾಗೆ ಕಡಿವಾಣ ಹಾಕಬಹುದು ಎಂದರು.

ಇದಕ್ಕೆ ಸಭೆಯಲ್ಲಿದ್ದ ದಲಿತ ಮುಖಂಡರಾದ ಗಂಗಾಧರ, ಅಶೋಕ, ರಘುವೀರ್ ಸೂಟರ್ ಪೇಟೆ, ಶೇಖರ ಸಹಿತ ಹಲವರು ಧ್ವನಿಗೂಡಿಸಿದರು. ಅಲ್ಲದೆ ಸಭೆಯ ಆರಂಭದಿಂದ ಕೊನೆಯವರೆಗೂ ಮಾತನಾಡಿದ ಪ್ರತಿಯೊಬ್ಬರೂ ಜಿಲ್ಲೆಯಲ್ಲಿ ನಡೆಯುತ್ತಿರುವ ಗಾಂಜಾ ಮತ್ತು ಮರಳು ಮಾಫಿಯಾದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ಸಂದರ್ಭ ಉತ್ತರಿಸಿದ ಎಸ್ಪಿ, ಬಂಟ್ವಾಳದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ನಾಗೇಶ್ ಡಿ.ಎಲ್. ಅವರ ಮೂಲಕ ಗಾಂಜಾದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನೀರು ಸಿಗದ ಕೊಳವೆ ಬಾವಿಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವುದು, ನಗರ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಆರೋಗ್ಯ ಸುರಕ್ಷಾ ಕವಚ, ಇಪ್, ಪಿಎಫ್ ಹಾಗೂ ಇತರ ಸೌಲಭ್ಯಗಳನ್ನು ನೀಡದೆ ಗುತ್ತಿಗೆದಾರರು ವಂಚಿಸುತ್ತಿರುವುದು, ಅಕ್ರಮ ಕಲ್ಲು ಗಣಿಗಾರಿಕೆ, ಸಮಾಜದಲ್ಲಿ ಹೆಚ್ಚಿರುವ ಜೋತಿಷ್ಯರ ಮತ್ತು ಖಾಸಗಿ ಚಿಟ್ ಪಂಡ್‌ಗಳಿಂದ ಸಾರ್ವಜನಿಕರಿಗೆ ಮೋಸ ಮೊದಲಾದ ಬಗ್ಗೆ ಚರ್ಚೆ ನಡೆಯಿತು.

ಸಭೆಯಲ್ಲಿ ರಾಜ ಪಲ್ಲಮಜಲು, ನಾರಾಯಣ ಪುಂಚಮೆ, ವಿಶ್ವನಾಥ ಚಂಡ್ತಿಮಾರ್, ಶೇಖರ ಎಲ್. ಬೆಳ್ತಂಗಡಿ, ಗಂಗಾಧರ ಮೊದಲಾದವರು ಮಾತನಾಡಿದರು. ಅಡಿಷನಲ್ ಎಸ್ಪಿ ವೇದಮೂರ್ತಿ, ಡಿವೈಎಸ್ಪಿಗಳಾದ ರವೀಶ್ ಸಿ.ಆರ್,  ಭಾಸ್ಕರ್, ಸರ್ಕಲ್ ಇನ್ಸ್‌ಪೆಕ್ಟರ್ ಮಂಜಯ್ಯ, ಪ್ರೊಬೆಷನರಿ ಐಪಿಎಸ್ ಅಧಿಕಾರಿ ನಾಗೇಶ್ ಡಿ.ಎಲ್., ಬಂಟ್ವಾಳ ನಗರ ಠಾಣಾಧಿಕಾರಿ ಎ.ಕೆ.ರಕ್ಷಿತ್ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಅಕ್ರಮ ಮರಳು ಸಾಗಾಟಗಾರರ ಮೇಲೆ ರೌಡಿ ಶೀಟರ್!
ಅಕ್ರಮ ಮರಳು ಸಾಗಾಟಗಾರರು ಹಾಗೂ ದಂಧೆಕೋರರ ಮೇಲೆ ರೌಡಿಶೀಟರ್ ತೆರೆಯುವ ಪ್ರಸ್ತಾಪವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ತಿಳಿಸಿದ್ದಾರೆ.

ಜಿಲ್ಲಾ ದಲಿತ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ 10, 12 ಚಕ್ರಗಳ ಲಾರಿಯಲ್ಲಿ ಅಕ್ರಮ ಮರಳು ಸಾಗಾಟವಾಗುತ್ತಿದ್ದರೂ ಹಿಡಿಯದ ಪೊಲೀಸರು ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ಬಡವರು ಮರಳು ಸಾಗಾಟ ಮಾಡುವಾಗ ಹಿಡಿದು ವಶಕ್ಕೆ ಪಡೆಯುತ್ತಾರೆ. ಅಧಿಕಾರಿಗಳ ಈ ಕ್ರಮದಿಂದ ಬಡವರಿಗೆ ಅವಧಿಯೊಳಗೆ ಮನೆ ನಿರ್ಮಿಸಲು ಸಾಧ್ಯವಾಗದೆ ಸರಕಾರದಿಂದ ಸಿಗುವ ಅನುದಾನ ವಾಪಸ್ ಹೋಗುತ್ತಿದೆ ಎಂದು ಸಭೆಯಲ್ಲಿದ್ದ ದಲಿತ ಮುಖಂಡ ಶೇಖರ ಬೆಳ್ತಂಗಡಿ ಸಹಿತ ಇತರರು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಮನೆ ನಿರ್ಮಾಣಕ್ಕೆ ಪಿಡಬ್ಲ್ಯುಡಿಯ ಯಾರ್ಡ್‌ನಿಂದ ಮರಳು ಖರೀದಿಸಿ ಸಾಗಾಟ ಮಾಡಿದರೆ ಈ ಸಮಸ್ಯೆ ಇರುವುದಿಲ್ಲ ಎಂದು ಸಲಹೆ ನೀಡಿದಾಗ, ಬಂಟ್ವಾಳದಲ್ಲಿ ಪಿಡಬ್ಲ್ಯುಡಿಯವರ ಮರಳು ಯಾರ್ಡ್ ಇಲ್ಲ ಎಂದು ದಲಿತ ಮುಖಂಡರು ತಿಳಿದರು. ಈ ಬಗ್ಗೆ ಪಿಡಬ್ಲ್ಯುಡಿ ಅಧಿಕಾರಿಗಳ ಜೊತೆ ಮಾತನಾಡುವುದಾಗಿ ಈ ಸಂದರ್ದಲ್ಲಿ ತಿಳಿಸಿದ ಎಸ್ಪಿ, ಮರಳು ಅಕ್ರಮ ಸಾಗಾಟಗಾರರು ಹಾಗೂ ದಂಧೆಕೋರರ ಮೇಲೆ ರೌಡಿಶೀಟರ್ ತೆರೆಯುವ ಪ್ರಸ್ತಾಪವಿದೆ. ಅಕ್ರಮ ಮರಳು ಸಾಗಾಟ ಮಾಡುವ ಲಾರಿ ಚಾಲಕ, ಕ್ಲೀನರ್ ಮಾತ್ರವಲ್ಲದೆ ಅದರ ಮಾಲಕನೂ ಜವಾಬ್ದಾರನಾಗಿರುತ್ತಾನೆ. ಹಾಗಾಗಿ ಮಾಲಕನ ವಿರುದ್ಧವೂ ರೌಡಿಶೀಟರ್ ಕೇಸ್ ತೆರೆಯಲಾಗುವುದು. ಎರಡನೆ ಬಾರಿ ಅಕ್ರಮ ಮರಳು ಸಾಗಾಟ ಮಾಡಿದರೆ 5 ಲಕ್ಷ ರೂ. ದಂಡ ವಿಧಿಸುವ ಪ್ರಸ್ತಾಪವಿದೆ. ಮರಳು ಅಕ್ರಮದ ವಿರುದ್ಧ ಕಂದಾಯ, ಗಣಿ ಇಲಾಖೆ ಕಾರ್ಯಾಚರಣೆ ನಡೆಸುವ ಸಂದರ್ಭ ರಕ್ಷಣೆ ಕೊಡುವುದಷ್ಟೇ ನಮ್ಮ ಜವಾಬ್ದಾರಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News