ನಿರಾಶ್ರಿತ ಶಿಬಿರಗಳು ಯಾತನಾ ಶಿಬಿರಗಳಂತಿವೆ : ಪೋಪ್

Update: 2017-04-23 14:40 GMT

ರೋಮ್ (ಇಟಲಿ), ಎ. 23: ‘ಕೂಡಿ ಹಾಕುವ ಕೇಂದ್ರ’ಗಳಿಂದ ನಿರಾಶ್ರಿತರು ಮತ್ತು ವಲಸಿಗರನ್ನು ಹೊರಗೆ ಬಿಡಿ ಎಂದು ಪೋಪ್ ಫ್ರಾನ್ಸಿಸ್ ಸರಕಾರಗಳನ್ನು ಶನಿವಾರ ಒತ್ತಾಯಿಸಿದ್ದಾರೆ. ಇಂಥ ಹೆಚ್ಚಿನ ಕೇಂದ್ರಗಳು ‘ಯಾತನಾ ಶಿಬಿರ’ (ಯಹೂದಿಗಳನ್ನು ಕೂಡಿಹಾಕಲು ಹಿಟ್ಲರ್ ಬಳಸುತ್ತಿದ್ದ ಕಾನ್ಸಂಟ್ರೇಶನ್ ಕ್ಯಾಂಪ್ಸ್)ಗಳಾಗಿವೆ ಎಂದಿದ್ದಾರೆ.

 ರೋಮ್ ಬ್ಯಾಸಿಲಿಕಕ್ಕೆ ಭೇಟಿ ನೀಡಿ ವಲಸಿಗರನ್ನು ಭೇಟಿಯಾದ ಬಳಿಕ ಅವರು ಮಾತನಾಡುತ್ತಿದ್ದರು. ಗ್ರೀಸ್ ದ್ವೀಪ ಲೆಸ್ಬೋಸ್‌ನಲ್ಲಿರುವ ಶಿಬಿರವೊಂದಕ್ಕೆ ಕಳೆದ ವರ್ಷ ನೀಡಿದ ಭೇಟಿಯನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ಆ ಶಿಬಿರದಲ್ಲಿ ಪೋಪ್ ಮಧ್ಯಪ್ರಾಚ್ಯದ ಮುಸ್ಲಿಮ್ ನಿರಾಶ್ರಿತರೊಬ್ಬರನ್ನು ಭೇಟಿಯಾದರು. ನಿರಾಶ್ರಿತರು ಯಾಕೆ ನಮ್ಮ ದೇಶಗಳಿಗೆ ಬರುತ್ತಿದ್ದಾರೆ ಎಂಬುದನ್ನು ಆ ವ್ಯಕ್ತಿ ಪೋಪ್‌ಗೆ ವಿವರಿಸಿದರು. ಆ ವ್ಯಕ್ತಿಯ ಕ್ರೈಸ್ತ ಪತ್ನಿ ತನ್ನ ಶಿಲುಬೆಯನ್ನು ಕಿತ್ತೆಸಲು ನಿರಾಕರಿಸಿದುದಕ್ಕಾಗಿ ಭಯೋತ್ಪಾದಕನೊಬ್ಬ ಆಕೆಯ ಕತ್ತು ಸೀಳಿ ಕೊಂದಿದ್ದ. ಆ ಬಳಿಕ ಆತ ಅಲ್ಲಿಂದ ಪರಾರಿಯಾಗಿ ಗ್ರೀಸ್‌ಗೆ ಬಂದಿದ್ದರು.

‘‘ಆ ಯಾತನಾ ಶಿಬಿರದಿಂದ ಆ ವ್ಯಕ್ತಿ ಹೊರಗೆ ಹೋಗಿದ್ದಾನೆಯೇ ಎನ್ನುವುದು ನನಗೆ ತಿಳಿದಿಲ್ಲ. ಈ ಶಿಬಿರಗಳಲ್ಲಿ ಭಾರೀ ಸಂಖ್ಯೆಯಲ್ಲಿ ನಿರಾಶ್ರಿತರು ತುಂಬಿದ್ದು, ಹೆಚ್ಚಿನವುಗಳು ಯಾತನಾ ಶಿಬಿರಗಳಾಗಿವೆ’’ ಎಂದು ಪೋಪ್ ಹೇಳಿದರು.

ನಿರಾಶ್ರಿತರಿಗೆ ನೆರವು ನೀಡುತ್ತಿರುವ ದೇಶಗಳನ್ನು ಪೋಪ್ ಶ್ಲಾಘಿಸಿದರು ಹಾಗೂ ಈ ಹೆಚ್ಚಿನ ಹೊರೆಯನ್ನು ಸಹಿಸಿಕೊಳ್ಳುತ್ತಿರುವುದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಮಾನವಹಕ್ಕುಗಳಿಗಿಂತ ಅಂತಾರಾಷ್ಟ್ರೀಯ ಒಪ್ಪಂದಗಳೇ ಮುಖ್ಯವಾಗಿರುವ ಈ ಕಾಲದಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡುತ್ತಿರುವುದು ಸ್ವಾಗತಾರ್ಹ ಎಂದರು.

ಈ ಬಗ್ಗೆ ಹೆಚ್ಚಿನ ವಿವರಣೆಯನ್ನು ಪೋಪ್ ನೀಡಿಲ್ಲ. ಆದಾಗ್ಯೂ, ವಲಸಿಗರು ಗಡಿ ದಾಟುವುದನ್ನು ತಡೆಯಲು ಐರೋಪ್ಯ ಒಕ್ಕೂಟ ಮತ್ತು ಲಿಬಿಯ ಹಾಗೂ ಐರೋಪ್ಯ ಒಕ್ಕೂಟ ಮತ್ತು ಟರ್ಕಿಗಳ ನಡುವೆ ನಡೆದಿರುವ ಒಪ್ಪಂದಗಳನ್ನು ಅವರು ಉಲ್ಲೇಖಿಸಿರಬಹುದು ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News