ಆರ್ಥಿಕ ಬೆಳವಣಿಗೆಗೆ ಒತ್ತು : ನೀತಿ ಆಯೋಗದಿಂದ 300 ನಿರ್ದಿಷ್ಟ ಅಂಶಗಳ ಕ್ರಿಯಾಯೋಜನೆ

Update: 2017-04-23 14:49 GMT

ಹೊಸದಿಲ್ಲಿ,ಎ.23: ನೀತಿ ಆಯೋಗವು ರವಿವಾರ ಇಲ್ಲಿ ತನ್ನ ಆಡಳಿತ ಮಂಡಳಿಯ ಮೂರನೇ ಸಭೆಯಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು 300 ನಿರ್ದಿಷ್ಟ ಅಂಶಗಳ ಕ್ರಿಯಾಯೋಜನೆಯನ್ನು ಮಂಡಿಸಿತು.ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 15 ವರ್ಷಗಳ ‘ವಿಜ್ಹನ್ ಡಾಕ್ಯುಮೆಂಟ್ ’ನ್ನು ಮಂಡಿಸಿದ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗಾರಿಯಾ ಅವರು ಎಲ್ಲ ಕ್ಷೇತ್ರಗಳನ್ನೊಳಗೊಂಡ ಈ ಕ್ರಿಯಾತ್ಮಕ ಅಂಶಗಳನ್ನು ಮುಂದಿಟ್ಟರು. ಆದರೆ ಈ ಕ್ರಿಯಾಯೋಜನೆಯ ವಿವರಗಳು ಲಭ್ಯವಾಗಿಲ್ಲ.

ಪನಗಾರಿಯಾ ಅವರು ‘ವಿಜ್ಹನ್ ಡಾಕ್ಯುಮೆಂಟ್ ’ಜೊತೆ ಏಳು ವರ್ಷಗಳ ಕಾರ್ಯತಂತ್ರ ಮತ್ತು ಮೂರು ವರ್ಷಗಳ ಕ್ರಿಯಾ ಕಾರ್ಯಸೂಚಿಯನ್ನೂ ಮಂಡಿಸಿದರು.

ರಾಜ್ಯಗಳಿಂದ ಸ್ವೀಕರಿಸಲಾಗಿರುವ ಮಾಹಿತಿಗಳ ಆಧಾರದಲ್ಲಿ ಈ ವಿಜ್ಹನ್ ಡಾಕ್ಯುಮೆಂಟ್ ಸಿದ್ಧಗೊಳಿಸಲಾಗಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಈ ದೂರದೃಷ್ಟಿಯನ್ನು ಮುಂದಕ್ಕೊಯ್ಯಲು ರಾಜ್ಯಗಳಿಂದ ಮಾಹಿತಿ ಮತ್ತು ಬೆಂಬಲವನ್ನು ಪನಗಾರಿಯಾ ಕೋರಿದರು.

ಆರ್ಥಿಕತೆಯ ಪರಿವರ್ತನೆಗಾಗಿ ಮತ್ತು ಶಿಕ್ಷಣ,ಆರೋಗ್ಯ ಹಾಗೂ ಮೂಲಸೌಕರ್ಯ ಇತ್ಯಾದಿ ಕ್ಷೇತ್ರಗಳಲ್ಲಿ ರಾಜ್ಯಗಳೊಂದಿಗೆ ಸಹಕಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕಾರ್ಯಗಳ ಬಗ್ಗೆ ಆಯೋಗದ ಸಿಇಒ ಅಮಿತಾಬ್ ಕಾಂತ್ ವಿವರಿಸಿದರು.

ಕೇಂದ್ರ ಸರಕಾರದಿಂದ ಪ್ರಾಯೋಜಿತ ಕಾರ್ಯಕ್ರಮಗಳು, ಸ್ವಚ್ಛ ಭಾರತ ಮತ್ತು ಕೌಶಲಾಭಿವೃದ್ಧಿ ಇವುಗಳಿಗೆ ರೂಪ ನೀಡುವಲ್ಲಿ ಮುಖ್ಯಮಂತ್ರಿಗಳ ಉಪಸಮಿತಿಗಳ ಕಾರ್ಯಗಳ ಬಗ್ಗೆಯೂ ಅವರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News