ಹೆಚ್ಚು ಉಪಗ್ರಹ ನಿರ್ಮಾಣಕ್ಕೆ ಇಸ್ರೊ ನಿರ್ಧಾರ

Update: 2017-04-23 14:57 GMT

ಹೊಸದಿಲ್ಲಿ, ಎ.23: ಅಂತರಿಕ್ಷ ಯಾನದ ವೆಚ್ಚ ತಗ್ಗಿಸಲು ಮತ್ತು ಉಪಗ್ರಹ ನಿರ್ಮಾಣ ಕಾರ್ಯವನ್ನು ಹೆಚ್ಚಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ನಿರ್ಧರಿಸಿದೆ.

ಅಲ್ಲದೆ ವರ್ಷಕ್ಕೆ 12 ಉಪಗ್ರಹಗಳ ಉಡಾವಣೆಗೂ ನಿರ್ಧರಿಸಲಾಗಿದೆ. ಈ ಮೊದಲು ವರ್ಷಕ್ಕೆ 2ರಿಂದ ಮೂರು ಉಪಗ್ರಹ ಉಡಾಯಿಸಲಾಗುತ್ತಿತ್ತು. ಬಳಿಕ ಇದನ್ನು ಏಳಕ್ಕೆ ಹೆಚ್ಚಿಸಲಾಗಿದೆ. ಇದೀಗ ವರ್ಷಕ್ಕೆ 8ರಿಂದ 9ರಷ್ಟು ಪಿಎಸ್‌ಎಲ್‌ವಿ ಉಪಗ್ರಹ, ಎರಡು ಜಿಎಸ್‌ಎಲ್‌ವಿ- ಎಂಕೆ 2 ಮತ್ತು ಒಂದು ಜಿಎಸ್‌ಎಲ್‌ವಿ- ಎಂಕೆ 3 ಸೇರಿದಂತೆ ಒಟ್ಟು 12 ಉಪಗ್ರಹ ಉಡಾಯಿಸಲು ನಿರ್ಧರಿಸಲಾಗಿದೆ ಎಂದು ಇಸ್ರೊ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ತಿಳಿಸಿದ್ದಾರೆ.

ಮುಂದಿನ ಕ್ಯಾಲೆಂಡರ್ ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಚಂದ್ರಯಾನ-2 ಯೋಜನೆಯನ್ನು ಕೈಗೆತ್ತಿಕೊಳ್ಳಲು ಇಸ್ರೊ ನಿರ್ಧರಿಸಿದೆ. ಇದರಲ್ಲಿ ರಷ್ಯಾದ ಪಾಲುದಾರಿಕೆ ಇರುವುದಿಲ್ಲ. ಭಾರತೀಯರನ್ನೇ ಒಳಗೊಂಡಿರುವ ಯೋಜನೆಯಿದು ಎಂದವರು ತಿಳಿಸಿದರು. ಇದಕ್ಕೆ ಅಗತ್ಯವಿರುವ ಇಂಜಿನ್, ಅಂತರಿಕ್ಷದಲ್ಲಿ ಇಳಿಯುವ ವಿಮಾನ.. ಇತ್ಯಾದಿ ಎಲ್ಲದರ ಸಿದ್ಧತೆ ನಡೆಯುತ್ತಿದೆ.

ಮಂಗಳನೆಡೆಗೆ ಮತ್ತೊಂದು ಯಾನ, ಶುಕ್ರ ಗ್ರಹದೆಡೆಗೆ ಯಾನ, ಕ್ಷುದ್ರಗ್ರಹದೆಡೆಗೆ ಯಾನ.. ಇವೆಲ್ಲಾ ನಮ್ಮ ಮುಂದಿರುವ ಯೋಜನೆಗಳು. ಮರು ಬಳಸಬಹುದಾದ ಉಡ್ಡಯನಾ ವಾಹನದ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಅಲ್ಲದೆ ಅಂತರಿಕ್ಷ ನಿಲ್ದಾಣ ನಿರ್ಮಿಸುವ ಪ್ರಸ್ತಾವನೆಗೆ ಇನ್ನಷ್ಟೇ ಅಂಗೀಕಾರ ದೊರಕಬೇಕಿದೆ ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News