ಇಸ್ಲಾಮಿ ನಿಯಮಗಳನ್ನು ಪಾಲಿಸದ್ದಕ್ಕಾಗಿ ತ್ರಿವಳಿ ತಲಾಖ್ ಕೋರ್ಟ್‌ನಲ್ಲಿ ರದ್ದು

Update: 2017-04-23 15:18 GMT

ಉಜ್ಜೈನ್(ಮ.ಪ್ರ),ಎ.23: ಮುಸ್ಲಿಂ ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿರುವ ಪದ್ಧತಿಯನ್ನು ಅನುಸರಿಸಲಾಗಿಲ್ಲ ಎಂಬ ಕಾರಣದಿಂದ ವ್ಯಕ್ತಿಯೋರ್ವ ತನ್ನ ಪತ್ನಿಗೆ ನೀಡಿದ್ದ ತ್ರಿವಳಿ ತಲಾಖ್‌ನ್ನು ಇಲ್ಲಿಯ ಕುಟುಂಬ ನ್ಯಾಯಾಲಯವು ರದ್ದುಗೊಳಿಸಿದೆ.

ತೌಸೀಫ್ ಶೇಖ್ ತನ್ನ ಪತ್ನಿಗೆ ವಿಚ್ಛೇದನವನ್ನು ನೀಡಲು ಅನುಸರಿಸಿದ್ದ ಕ್ರಮ ‘ಅಕ್ರಮ ಮತ್ತು ಪರಿಣಾಮಶೂನ್ಯ ’ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕುಟುಂಬ ನ್ಯಾಯಾಲಯದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶ ಓಂಪ್ರಕಾಶ ಶರ್ಮಾ ಅವರು ಅದನ್ನು ರದ್ದುಗೊಳಿ ಸಿದರು.

ಅರ್ಷಿ ಖಾನ್ ಮತ್ತು ದೇವಾಸ್ ನಿವಾಸಿ ತೌಸೀಫ್ ಅವರ ಮದುವೆ 2013, ಜ.19ರಂದು ನಡೆದಿತ್ತು. ಕೆಲ ಸಮಯದ ಬಳಿಕ ತವರಿನಿಂದ ಹಣ ತರುವಂತೆ ತೌಸೀಫ್ ಆಕೆಯನ್ನು ಒತ್ತಾಯಿಸತೊಡಗಿದ್ದ. ತನ್ನ ಬೇಡಿಕೆ ಈಡೇರದಿದ್ದಾಗ ಆತ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದ ಎಂದು ಸಂತ್ರಸ್ತ ಪತ್ನಿಯ ಪರ ನ್ಯಾಯವಾದಿ ಅರವಿಂದ ಗೌಡ್ ತಿಳಿಸಿದರು.

 ಕಿರುಕುಳ ಸಹಿಸಲು ಅಸಾಧ್ಯವಾದಾಗ ಅರ್ಷಿ ಗಂಡನ ಮನೆಯನ್ನು ತೊರೆದು ತವರು ಮನೆಗೆ ಮರಳಿದ್ದಳು ಮತ್ತು ವರದಕ್ಷಿಣೆ ನಿಗ್ರಹ ಕಾಯ್ದೆಯಡಿ ತೌಸೀಫ್ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಆ ಪ್ರಕರಣವಿನ್ನೂ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದೆ ಎಂದರು.

ತನ್ಮಧ್ಯೆ, 2014, ಅ.9ರಂದು ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ-ಪತ್ನಿ ಉಜ್ಜೈನ್ ನ್ಯಾಯಾಲಯಕ್ಕೆ ಬಂದಿದ್ದಾಗ ತೌಸೀಫ್ ನ್ಯಾಯಾಲಯದ ಆವರಣದಲ್ಲಿಯೇ ತಲಾಖ್ ಎಂದು ಹೇಳಿ ಅರ್ಷಿಗೆ ಮೌಖಿಕವಾಗಿ ವಿಚ್ಛೇದನ ನೀಡಿದ್ದ.

ಬಳಿಕ, ಸದ್ರಿ ದಿನಾಂಕದಂದು ನ್ಯಾಯಾಲಯದ ಆವರಣದಿಂದ ಹೊರಗೆ ಬರುತ್ತಿದ್ದಾಗ ಮೂರು ಬಾರಿ ತಲಾಖ್ ಹೇಳುವ ಮೂಲಕ ತಾನು ವಿಚ್ಛೇದನ ನೀಡಿದ್ದೇನೆ ಎಂದು ನೋಟಿಸ್‌ವೊಂದರ ಮೂಲಕ ತೌಸೀಫ್ ಅರ್ಷಿಗೆ ತಿಳಿಸಿದ್ದ.

ಈ ವಿಷಯದಲ್ಲಿ ಮುಸ್ಲಿಂ ಧಾರ್ಮಿಕ ಗ್ರಂಥಗಳಲ್ಲಿ ತಿಳಿಸಲಾಗಿರುವ ಪದ್ಧತಿಯನ್ನು ಅನುಸರಿಸಲಾಗಿಲ್ಲ ಎಂಬ ಕಾರಣದಿಂದ ಅರ್ಷಿ ಈ ವಿಚ್ಛೇದನವನ್ನು ಪ್ರಶ್ನಿಸಿದ್ದಳು.

ವಿಚ್ಛೇದನ ನೀಡಿಕೆಯಲ್ಲಿ ಅಸಮಂಜಸತೆಗಳಿವೆ ಮತ್ತು ‘ತಲಾಖ್ ಅಹ್ಸಾನ್ ಅಥವಾ ತಲಾಖ್ ಹಸನ್ ’ಇವೆರಡು ವಿಧಾನಗಳ ಪೈಕಿ ಯಾವುದರ ಮೂಲಕ ತಾನು ಪತ್ನಿಗೆ ವಿಚ್ಛೇದನ ನೀಡಿದ್ದೇನೆ ಎನ್ನುವುದನ್ನು ತನ್ನ ಉತ್ತರದಲ್ಲಿ ಉಲ್ಲೇಖಿಸಲು ತೌಸಿಫ್ ವಿಫಲನಾಗಿದ್ದಾನೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

ತಾನು ಉಲ್ಲೇಖಿಸಿರುವಂತೆ,ತ್ರಿವಳಿ ತಲಾಖ್ ಅನ್ನು ತಾನು ಉಚ್ಚರಿಸಿದಾಗ ಅರ್ಷಿ ನ್ಯಾಯಾಲಯದ ಆವರಣದಲ್ಲಿ ಉಪಸ್ಥಿತಳಿದ್ದಳು ಎನ್ನುವುದಕ್ಕೆ ನಂಬಲರ್ಹ ಸಾಕ್ಷಾಧಾರವನ್ನು ಒದಗಿಸಲು ತೌಸೀಫ್ ವಿಫಲನಾಗಿದ್ದಾನೆ ಎಂದೂ ನ್ಯಾ.ಶರ್ಮಾ ಹೇಳಿದರು. ಶರೀಅತ್ ಪ್ರಕಾರ ವಿಚ್ಛೇದನ ನೀಡುವಾಗ ಪತ್ನಿಯ ಉಪಸ್ಥಿತಿ ಕಡ್ಡಾಯವಾಗಿದೆ.

ಅಲ್ಲದೆ ಶರೀಅತ್‌ಗೆ ಅನುಗುಣವಾಗಿ ಈ ವಿಷಯದಲ್ಲಿ ರಾಜಿ ಸಂಧಾನಕ್ಕೆ ಉಭಯ ಕಡೆಗಳವರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದನ್ನೂ ನ್ಯಾಯಾಲಯವು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News