ಕೊಲೆಯತ್ನಕ್ಕೆ ಕಾರಣವಾದ ಕೌಟುಂಬಿಕ ಕಲಹ: ಮೂವರಿಗೆ ಗಾಯ
ಬಂಟ್ವಾಳ, ಎ.23: ಮನೆಯ ಒಳಗೆ ನಡೆದ ಕೌಟುಂಬಿಕ ಕಲಹದಿಂದ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲಮುಡ್ನೂರು ಗ್ರಾಮದ ಆಲಂಗಾರು ಸಮೀಪದ ಗುಂಪಲಡ್ಕ ಎಂಬಲ್ಲಿ ನಡೆದಿದೆ.
ಆಲಂಗಾರು ಗುಂಪಲಡ್ಕ ನಿವಾಸಿ ಶೀನ ನಾಯ್ಕ (60), ಪತ್ನಿ ಕಮಲಾ (40), ಪುತ್ರ ವಸಂತ (25) ಗಾಯಗೊಂಡವರು.
ಘಟನೆ ವಿವರ: ಪತ್ನಿಯ ಬಗ್ಗೆ ಅನುಮಾನದಿಂದ ಶೀನ ನಾಯ್ಕ ಶನಿವಾರ ಸಂಜೆ ಗಲಾಟೆ ಆರಂಭಿಸಿದ್ದು, ಮಚ್ಚಿನಂತಹ ಆಯುಧದಲ್ಲಿ ಕಮಲ ಅವರ ಕುತ್ತಿಗೆ ಭಾಗಕ್ಕೆ ಕಡಿದಿದ್ದಾನೆ. ಈ ಸಂದರ್ಭ ತಡೆಯಲು ಬಂದ ಪುತ್ರ ವಸಂತನ ಮೇಲೆಯೂ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಇದರಿಂದ ವಸಂತ ಅವರ ಬೆನ್ನಿನ ಭಾಗಕ್ಕೆ ಏಟಾಗಿದ್ದು, ಬೆನ್ನು ಹುರಿ ತುಂಡಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಗಲಾಟೆ ನಡೆಯುತ್ತಿದ್ದಂತೆ ಪತ್ನಿ ಸಲಾಕೆಯಿಂದ ಗಂಡನ ಮೇಲೆ ದಾಳಿ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಮೂವರೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಸಹಾಯ ಅಧೀಕ್ಷಕ ರವೀಶ್ ಸಿ. ಆರ್., ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ, ಡಿಸಿಐಬಿ ನಿರೀಕ್ಷಕ ಅಮಲುಲ್ಲಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಟ್ಲ ಉಪನಿರೀಕ್ಷಕ ನಾಗರಾಜ್, ಸಿಬ್ಬಂದಿ ಬಾಲಕೃಷ್ಣ, ಪ್ರವೀಣ್ ಕುಮಾರ್, ಸತೀಶ್, ರಮೇಶ್, ಜಯಕುಮಾರ್ ಮತ್ತಿತರರು ತನಿಖೆ ನಡೆಸುತ್ತಿದ್ದಾರೆ.