ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ: ಶಿವಸುಂದರ್
ಉಡುಪಿ, ಎ.23: ನಮಗೆ ಬೇಕಾದ ಶಿಕ್ಷಣ, ಉದ್ಯೋಗ ಪಡೆಯುವ ಹಕ್ಕಿಗೆ ಇಂದು ಚ್ಯುತಿ ಬಂದಿದೆ. ಭವಿಷ್ಯದಲ್ಲಿ ನಮಗೆ ಬೇಕಾದ ರೀತಿಯಲ್ಲಿ ಬದುಕಲು ಸಾಧ್ಯವಿಲ್ಲ. ನಮ್ಮ ಸಂಸ್ಕೃತಿಯಂತೆ ಇಷ್ಟದ ಬಟ್ಟೆ ಧರಿಸಲು, ಆಹಾರ ಸೇವಿಸುವ ಹಕ್ಕು ಈ ದೇಶದಲ್ಲಿ ಇಲ್ಲವಾಗುತ್ತಿದೆ. ಸಂವಿಧಾನದ ಮೂಲ ಆಶಯ ಸಮಾನತೆ ಮತ್ತು ಮಮತೆಯ ಆಶಯಕ್ಕೆ ಇಂದು ಧಕ್ಕೆ ಬಂದಿದೆ ಎಂದು ಅಂಕಣಕಾರ ಶಿವಸುಂದರ್ ಟೀಕಿಸಿದ್ದಾರೆ.
ಉಡುಪಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್‌ರವರ 126ನೆ ಜನ್ಮದಿನದ ಪ್ರಯುಕ್ತ ರವಿವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಜಡ್ಕ್ ಸ್ಟಾಂಡ್ ಬಳಿ ನಡೆದ ಸಂವಿಧಾನ ಸಂರಕ್ಷಣೆಗಾಗಿ ಜೈ ಭೀಮ್ ಮಹಾ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಇಂದು ಈ ದೇಶವನ್ನು ಕೇವಲ ಶ್ರೀಮಂತರ ಹಾಗೂ ಒಂದು ಧರ್ಮದವರನ್ನಾಗಿಸುವ ಕೆಲಸ ನಡೆಯುತ್ತಿದೆ. ಆದರೆ ಅದಕ್ಕೆ ಅವಕಾಶ ನೀಡಬಾರದು. ಇದು ಎಲ್ಲರಿಗೂ ಸೇರಿದ ದೇಶವಾಗಿದೆ ಎಂದ ಅವರು, ಮೀಸಲಾತಿ ಪರ ಎಂದು ಹೇಳುತ್ತಿರುವ ಬಿಜೆಪಿ ಸರಕಾರ ಮೀಸಲಾತಿಯನ್ನು ಅಪ್ರಸ್ತುತಗೊಳಿಸುವ ನೀತಿಯನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು.
ರಾಷ್ಟ್ರದ ವಿರುದ್ಧ ಮಾತನಾಡಿದರೆ ಮಾತ್ರ ರಾಷ್ಟ್ರದ್ರೋಹವೇ ಹೊರತು ಸರಕಾರದ ವಿರುದ್ಧ ಮಾತನಾಡಿದರೆ ಅಲ್ಲ. ಸರಕಾರವನ್ನು ಟೀಕಿಸುವ ಹಕ್ಕು ನಮಗೆ ನೀಡಲಾಗಿದೆ. ಆದರೆ ಇಂದು ಆ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಕೊಲೆಯನ್ನು ಕೂಡ ಕಾನೂನುಬದ್ಧಗೊಳಿಸುವ ಸಂಚು ಮೋದಿ ಸರಕಾರದಿಂದ ನಡೆಯುತ್ತಿದೆ ಎಂದು ದೂರಿದರು.
ಇಂದು ನಮಗೆ ಜೀವಕಾರುಣ್ಯದ ರಾಜಕಾರಣ ಬೇಕೆ ಹೊರತು ದ್ವೇಷ ಬಿತ್ತುವ ರಾಜಕಾರಣವಲ್ಲ. ಅಂಬೇಡ್ಕರ್‌ರ ಸಮಾನತೆ ಮತ್ತು ಮಮತೆ ಆಶಯವನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಸಮಾರೋಪ ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ಜನಶಕ್ತಿಯ ಮಲ್ಲಿಗೆ ಮಾತನಾಡಿ, ನಮ್ಮನ್ನು ರಕ್ಷಿಸಲು ಮಾಡಿರುವ ಸಂವಿಧಾನವನ್ನು ಈಗ ನಾವು ರಕ್ಷಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿಯ ಬಿಕ್ಕಟ್ಟನ್ನು ದೇಶ ಎದುರಿಸುತ್ತಿದೆ. ಸಂವಿಧಾನದ ಆಶಯವು ಅಪಾಯದಲ್ಲಿ ಸಿಲುಕಿದೆ ಎಂದರು.
ಜನಪರ ಹೋರಾಟಗಾರ ನೂರ್ ಶ್ರೀಧರ್, ಹೋರಾಟಗಾರ ಹುಲಿಕುಂಟೆ ಮೂರ್ತಿ ಮಾತನಾಡಿದರು. ಅಧ್ಯಕ್ಷತೆಯನ್ನು ಸಂವಿಧಾನ ಸಂರಕ್ಷಣಾ ಮಹಾ ರ್ಯಾಲಿಯ ಗೌರವಾಧ್ಯಕ್ಷ ರೆ.ಫಾ.ವಿಲಿಯಂ ಮಾರ್ಟಿಸ್ ವಹಿಸಿದ್ದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಸುಂದರ್ ಮಾಸ್ತರ್, ಶ್ಯಾಮ್‌ರಾಜ್ ಬಿರ್ತಿ, ಶೇಖರ್ ಹೆಜಮಾಡಿ, ಉದಯಕುಮಾರ್ ತಲ್ಲೂರು, ಎಸ್.ಎಸ್. ಪ್ರಸಾದ್, ಬೊಗ್ರ ಕೊರಗ ಮೊದಲಾದವರು ಉಪಸ್ಥಿತರಿದ್ದರು.
ನಾರಾಯಣ ಮಣೂರು ಸ್ವಾಗತಿಸಿದರು. ದಿನಕರ ಎಸ್.ಬೆಂಗ್ರೆ ಕಾರ್ಯ ಕ್ರಮ ನಿರೂಪಿಸಿದರು. ಈ ಇದಕ್ಕೂ ಮುನ್ನ ಗಂಗೊಳ್ಳಿ, ಕಾರ್ಕಳ, ಹೆಜಮಾಡಿ ಯಿಂದ ಹೊರಟ ಬೈಕ್ ರ್ಯಾಲಿ ಉಡುಪಿಯಲ್ಲಿ ಸಮಾಪ್ತಿಗೊಂಡಿತು.