ಹೆಣ್ಣು ಹೆತ್ತಳೆಂದು ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಗೆ ತಲಾಖ್ ಹೇಳಿದ ಪತಿ

Update: 2017-04-23 16:22 GMT

ಅಮ್ರೋಹಾ,ಎ.23: ಉತ್ತರ ಪ್ರದೇಶದ ಅಮ್ರೋಹಾದ ರಾಷ್ಟ್ರಮಟ್ಟದ ನೆಟ್ ಬಾಲ್ ಆಟಗಾರ್ತಿ ಹೆಣ್ಣುಮಗುವಿಗೆ ‘ಜನ್ಮ ’ ನೀಡಿದ ತಪ್ಪಿಗೆ ಆಕೆಯ ಪತಿರಾಯ ತ್ರಿವಳಿ ತಲಾಖ್ ಹೇಳುವ ಮೂಲಕ ವಿಚ್ಛೇದನ ನೀಡಿದ್ದಾನೆ.

ಏಳು ಬಾರಿಯ ರಾಷ್ಟ್ರೀಯ ಚಾಂಪಿಯನ್, ಅಮ್ರೋಹಾ ನಿವಾಸಿ ಶುಮಾಯಲಾ ಜಾವೇದ್ ಮತ್ತು ಲಕ್ನೋದ ಗೋಸಾಯಿಗಂಜ್‌ನ ಅಝಂ ಅಬ್ಬಾಸಿ ಅವರ ಮದುವೆ 2014,ಫೆ.9ರಂದು ನಡೆದಿತ್ತು.

ಅತ್ತೆ-ಮಾವ ಆರಂಭದಿಂದಲೇ ವರದಕ್ಷಿಣೆಗಾಗಿ ತನಗೆ ಹಿಂಸೆ ನೀಡುತ್ತಿದ್ದರು. ಅವರು ತನ್ನನ್ನು ಶೋಷಿಸುತ್ತಿದ್ದರು. ಆಗಾಗ್ಗೆ ವರದಕ್ಷಿಣೆಗಾಗಿ ತನ್ನ ತಂದೆಯನ್ನು ಪೀಡಿಸುತ್ತಿದ್ದರು. 2014,ಜೂನ್‌ನಲ್ಲಿ ತನ್ನ ತಂದೆ ಎರಡು ಲ.ರೂ.ಗಳನ್ನು ವರದಕ್ಷಿಣೆಯಾಗಿ ನೀಡಿದ್ದರು. ಆನಂತರ ಕೆಲಕಾಲ ತನ್ನನ್ನು ಚೆನ್ನಾಗಿ ನೋಡಿಕೊಳ್ಳಲಾಗಿತ್ತು. ಆದರೆ ಮತ್ತೆ ಎಲ್ಲವೂ ಯಥಾಸ್ಥಿತಿಗೆ ಮರಳಿತ್ತು. ತನ್ನ ನಾದಿನಿ ತನಗೆ ಬೆಂಕಿ ಹಚ್ಚಲೂ ಪ್ರಯತ್ನಿಸಿದ್ದಳು. ಸೆಪ್ಟೆಂಬರ್‌ನಲ್ಲಿ ತನ್ನ ತಂದೆ ಮತ್ತೆ ಒಂದು ಲ.ರೂ.ಅವರಿಗೆ ನೀಡಿದ್ದರು ಎಂದು ಶುಮಾಲಿಯಾ ಸುದ್ದಿಸಂಸ್ಥೆಗೆ ತಿಳಿಸಿದರು.

ಶುಮಾಲಿಯಾ ಗರ್ಭಿಣಿಯಾದಾಗ ಗಂಡುಮಗುವನ್ನೇ ಹೆರುವಂತೆ ಗಂಡನ ಮನೆಯವರು ತಾಕೀತು ಮಾಡಿದ್ದರು. ಹೆಣ್ಣೇನಾದರೂ ಹುಟ್ಟಿದರೆ ಪರಿಣಾಮ ನೆಟ್ಟಗಿರೋದಿಲ್ಲ ಎಂದು ಬೆದರಿಕೆಯೊಡ್ಡಿದ್ದರು. ಆಕೆಯ ಗರ್ಭದಲ್ಲಿರುವ ಮಗು ಗಂಡೋ ಹೆಣ್ಣೋ ಎಂದು ತಿಳಿಯಲು ಸ್ಕಾನಿಂಗ್ ಕೂಡ ಮಾಡಿಸಿದ್ದರು. ಅಂತಿಮವಾಗಿ ಎಂಟು ತಿಂಗಳ ಗರ್ಭಿಣಿಯನ್ನು ಮನೆಯಿಂದ ಹೊರದಬ್ಬಿದ್ದರು.

ಶುಮಾಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಆಕೆಯನ್ನು ಅವರೆಲ್ಲ ದೂರ ಮಾಡಿದ್ದರು. ತಂದೆ ಮಗಳನ್ನು ಮತ್ತು ಮೊಮ್ಮಗಳನ್ನು ಗಂಡನ ಮನೆಗೆ ಕರೆದೊಯ್ದ್ದಗ ಅವರಿಗೂ ಬೆದರಿಕೆಯೊಡ್ಡಿದ್ದರು. ಆದರೂ ಅವರು ಶುಮಾಲಿಯಾರನ್ನು ಅಲ್ಲಿ ಬಿಟ್ಟು ಬಂದಿದ್ದರು. ಆಕೆಗೆ ಆ ಮನೆಯಲ್ಲಿ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿತ್ತು. ಎಪ್ರಿಲ್‌ನಲ್ಲಿ ಗಂಡ ತ್ರಿವಳಿ ತಲಾಖ್ ಹೇಳಿ ಮನೆಯಿಂದ ಹೊರದಬ್ಬಿದ್ದ.ಆ ಸಂದರ್ಭದಲ್ಲಿ ಯಾರೂ....ಪೊಲೀಸರು ಅಥವಾ ಆಡಳಿತವೂ ತನಗೆ ನೆರವಾಗಲಿಲ್ಲ ಎಂದು ಶುಮಾಲಿಯಾ ಹೇಳಿದರು.

ತನಗೆ ನ್ಯಾಯವನ್ನು ಕೋರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರ ಮೊರೆ ಹೋಗಲು ಶುಮಾಲಿಯಾ ಈಗ ನಿರ್ಧರಿಸಿದ್ದಾರೆ.

‘‘ಅವರು ನನಗೆ ನ್ಯಾಯ ಒದಗಿಸುತ್ತಾರೆ ಎಂದು ನಿರೀಕ್ಷಿಸಿದ್ದೇನೆ. ಈ ಗಂಭೀರ ಸ್ಥಿತಿಯಲ್ಲಿ ನನಗೆ ನೆರವಾಗುವಂತೆ ಕೋರಿ ಪ್ರಧಾನಿಯವರಿಗೆ ಪತ್ರ ಬರೆದಿದ್ದೇನೆ. ತ್ರಿವಳಿ ತಲಾಖ್ ಮೂಲಕ ತಮ್ಮ ಪತ್ನಿಯರಿಗೆ ವಿಚ್ಛೇದನ ನೀಡುವ ಇಂತಹ ಜನರಿಗೆ ಅವರು ಪಾಠವನ್ನು ಕಲಿಸಬೇಕು ’’ಎಂದು ಆಕೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News