ಶಾಂತಿಭಂಗದ ದುರುದ್ದೇಶ: "ವೀರಕೇಸರಿ" ಫೇಸ್‌ಬುಕ್ ಅಕೌಂಟ್ ವಿರುದ್ಧ ಪ್ರಕರಣ ದಾಖಲು
Update: 2017-04-23 22:36 IST
ಮಂಗಳೂರು, ಎ.23: ಬಜರಂಗದಳ ಕಾರ್ಯಕರ್ತ ಜಗದೀಶ್ ಸುವರ್ಣರ ಸಾವಿನ ಬಗ್ಗೆ ಪ್ರಚೋದನಕಾರಿ ಬರವಣಿಗೆಗಳನ್ನು ಹಾಗೂ ಕಮೆಂಟ್ ಗಳನ್ನು ಪೋಸ್ಟ್ ಮಾಡಿರುವ "ವೀರಕೇಸರಿ" ಫೇಸ್‌ಬುಕ್ ಅಕೌಂಟ್ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುಪುರ ನದಿಯ ಅಳಿವೆ ಬಾಗಿಲಿನ ಬಳಿ ತೋಟಬೆಂಗ್ರೆ ನಿವಾಸಿ ಜಗದೀಶ್ ಸುವರ್ಣ ಎಂಬವರ ಮೃತದೇಹ ಶುಕ್ರವಾರ ಪತ್ತೆಯಾಗಿತ್ತು. ಅವರ ಸಹೋದರ ಶಿವಾನಂದ ಎಂಬವರು ಮರಣದಲ್ಲಿ ಅನುಮಾನ ಇರುವುದಾಗಿ ದೂರು ನೀಡಿದ್ದರು. ಶಿವಾನಂದ ನೀಡಿದ್ದ ದೂರಿನ ಮೇರೆಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಎಂಬುದಾಗಿ ಪ್ರಕರಣ ದಾಖಲಾಗಿತ್ತು.
ಪ್ರಚೋದನಕಾರಿ ಬರವಣಿಗೆಗಳು ಹಾಗೂ ಕಮೆಂಟ್ ಸಮಾಜದಲ್ಲಿ ಶಾಂತಿಭಂಗ ಉಂಟು ಮಾಡುವ ದುರುದ್ದೇಶ ಹೊಂದಿರುವುದರಿಂದ ವೀರಕೇಸರಿ ಫೇಸ್ ಬುಕ್ ಅಕೌಂಟ್‌ನ ಪೋಸ್ಟ್ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ 55/2017 ಕಲಂ: 153 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.