×
Ad

ಗ್ರಾಮೀಣ ಪ್ರದೇಶದಲ್ಲಿ ನೀರು ಪೂರೈಕೆಗೆ ಆದ್ಯತೆ ನೀಡಿ: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೂಚನೆ

Update: 2017-04-23 23:03 IST

ಉಡುಪಿ, ಎ.23: ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಕುರಿತು ಜಿಲ್ಲೆಯ ಪ್ರತಿ ಗ್ರಾಮದ ಗ್ರಾಮ ಲೆಕ್ಕಿಗ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಆಯಾ ತಾಲೂಕಿನ ತಹಶೀಲ್ದಾರರು ಪ್ರತಿದಿನ ವರದಿ ಪಡೆದುಕೊಳ್ಳುವಂತೆ ರಾಜ್ಯದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರವಿವಾರ ನಡೆದ ಜಿಲ್ಲೆಯ ಕಂದಾಯ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. 

ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಯಾವುದೇ ಹಣದ ಕೊರತೆ ಇಲ್ಲ. ಆದುದರಿಂದ ಮನೆಗೆ ನೀರಿನ ಸಮಸ್ಯೆಗೆ ಆಗದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ಪೂರೈಕೆಗೆ ಪ್ರಮುಖ ಆದ್ಯತೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಪ್ರಸ್ತುತ 42 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಪರಿಹಾರದಡಿ ಬಿಡುಗಡೆಯಾಗಿರುವ ಹಣವನ್ನು ವಿಕೋಪದಿಂದ ಹಾನಿಯಾದ ರಸ್ತೆಗಳ ದುರಸ್ಥಿಗೆ ನೀಡುವಂತೆ ನಿಯಮಗಳನ್ನು ಸಡಿಲಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು. ಈ ಕುರಿತಂತೆ ಸ್ಥಳದಲ್ಲೇ ಕಂದಾಯ ಇಲಾಖೆಯ ಕಾರ್ಯದರ್ಶಿ ಗಂಗಾರಾವ್ ಬಡೇರಿಯಾಗೆ ಕರೆ ಮಾಡಿದ ಕಂದಾಯ ಸಚಿವರು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು

ಮಳೆಗಾಲದಲ್ಲಿ ಸಿಡಿಲಿನಿಂದ ಮನೆಯ ವೈರಿಂಗ್ ಮತ್ತು ದನದ ಕೊಟ್ಟಿಗೆಗೆ ಹಾನಿಯಾದರೆ ಪರಿಹಾರ ನಿಧಿಯಲ್ಲಿ ಪರಿಹಾರ ನೀಡಲು ಅವಕಾಶ ನೀಡು ವಂತೆ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಒತ್ತಾಯಿಸಿದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಮತ್ತು 94 ಸಿ 94ಸಿಸಿಯಲ್ಲಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಿ, ಅರ್ಹರಿಗೆ ಹಕ್ಕುಪತ್ರಗಳನ್ನು ವಿತರಿಸುವಂತೆ ಸಚಿವರು ತಹಶೀಲ್ದಾರ್‌ಗಳಿಗೆ ಸೂಚಿಸಿದರು. ಜಮೀನಿನ ಸರ್ವೇ ಮಾಡಲು ಸವೇಯರ್‌ಗಳ ಕೊರತೆಯಿದ್ದಲ್ಲಿ ಲೈಸೆನ್ಸ್ ಇರುವ ಖಾಸಗಿ ಸರ್ವೇಯರ್ ಗಳನ್ನು ಬಳಸಿಕೊಳ್ಳುವಂತೆ ತಿಳಿಸಿದರು.

ಜಾಗದ ಪೋಡಿ ಮಾಡಲು ತಹಸೀಲ್ದಾರ್‌ಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಡೀಮ್ಡ್ ಫಾರೆಸ್ಟ್‌ನಲ್ಲಿನ ಜಾಗದ ಕುರಿತು ಅರಣ್ಯ ಇಲಾಖೆಯ ಅಭಿಪ್ರಾಯ ಕೇಳಿ ಪತ್ರ ಬರೆಯಬೇಡಿ, ಕಂದಾಯ ಇಲಾಖೆಗೆ ಸಂಬಂದಿಸಿ ದಂತೆ ಹೊರಡಿಸುವ ಆದೇಶಗಳನ್ನು ಅರ್ಥೈಸಿಕೊಂಡು, ಕಟ್ಟುನಿಟ್ಟಾಗಿ ಪಾಲಿಸಿ ಎಂದು ತಹಶೀಲ್ದಾರ್‌ಗಳಿಗೆ ಸಚಿವರು ಹೇಳಿದರು

94ಸಿಸಿ ಯಡಿ ಮಂಜೂರು ಮಾಡುವ ಜಾಗದ ಅಳತೆಯ ಕುರಿತು ಮಹಾ ನಗರಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳಿಗೆ ಪ್ರತ್ಯೇಕ ಮಾನದಂಡಗಳನ್ನು ರೂಪಿಸುವಂತೆ ಶಾಸಕರು ಹಾಗೂ ಉಸ್ತುವಾರಿ ಸಚಿವರು ಕಂದಾಯ ಸಚಿವರ ಮನವಿ ಮಾಡಿದರು. ಹಕ್ಕುಪತ್ರಗಳನ್ನು ನೀಡುವ ಕುರಿತಂತೆ ದಿನಾಂಕ ಪಟ್ಟಿಯನ್ನು ನಿಗದಿಪಡಿಸಿಕೊಂಡು ಅದರಂತೆ ಕಾರ್ಯ ನಿರ್ವಹಿಸಿ, ಆದಷ್ಟು ಶೀಘ್ರದಲ್ಲಿ ರೆಕಾರ್ಡ್ ತಯಾರಿಸಿ, ಫಲಾನುಭವಿಗಳಿಗೆ ಅವರ ಗ್ರಾಮದಲ್ಲೇ ಹಕ್ಕುಪತ್ರಗಳನ್ನು ವಿತರಿಸಬೇಕು ಎಂದರು.

ಸಭೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News