ಇನ್ನೋವಾ ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು
Update: 2017-04-23 23:12 IST
ಮಣಿಪಾಲ, ಎ.23: ಇನೋವಾ ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ಇಂದು ಸಂಜೆ 5 ಗಂಟೆ ಸುಮಾರಿಗೆ ಇಂದ್ರಾಳಿ ಪೆಟ್ರೋಲ್ ಬಂಕ್ ಎದುರು ನಡೆದಿದೆ.
ಮೃತರನ್ನು ಪರ್ಕಳ ಶ್ರೀವೈಷ್ಣವಿ ದುರ್ಗಾ ದೇವಸ್ಥಾನ ಸಮೀಪದ ನಿವಾಸಿ ಸತೀಶ್ ನಾಯ್ಕಾ(35) ಎಂದು ಗುರುತಿಸಲಾಗಿದೆ. ಇವರು ಮಣಿಪಾಲದಿಂದ ಉಡುಪಿ ಕಡೆ ಬರುತ್ತಿದ್ದಾಗ ಇನ್ನೋವಾ ಕಾರು ಪೆಟ್ರೋಲ್ ಬಂಕ್ ಕಡೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆಯಿತು.
ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸತೀಶ್ ನಾಯ್ಕಾ ಸಂಜೆ 6 ಗಂಟೆ ಸುಮಾರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಇವರು ಮಣಿಪಾಲ ಪ್ರೆಸ್‌ನಲ್ಲಿ ಉದ್ಯೋಗಿಯಾಗಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.