ನಿವೇಶನರಹಿತರಿಗೆ ಸ್ಥಳದ ವ್ಯವಸ್ಥೆಗೆ ಸಚಿವ ಕಾಗೋಡು ಸೂಚನೆ

Update: 2017-04-23 18:28 GMT

ಮಂಗಳೂರು, ಎ.23: ಜಿಲ್ಲೆಯಲ್ಲಿ ನಿವೇಶನರಹಿತರ ಪಟ್ಟಿ ತಯಾರಿಸಿ, ಅವರಿಂದ ಅರ್ಜಿ ಸ್ವೀಕರಿಸಿ, ಸ್ಥಳ ಲಭ್ಯ ಇರುವಲ್ಲಿ ನಿವೇಶನ ಒದಗಿಸಲು ವ್ಯವಸ್ಥೆ ಕಲ್ಪಿಸುವಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ದ.ಕ. ಜಿಲ್ಲೆಯಲ್ಲಿ 94ಎ ಕಲಂನಡಿ 1,11,150 ಅರ್ಜಿ ವಿಲೇವಾರಿಯಾಗಿದ್ದು, 2,580 ಅರ್ಜಿಗಳು ಇನ್ನೂ ಬಾಕಿ ಇವೆ. 94ಬಿ ಅಡಿಯಲ್ಲಿ 28,970 ಅರ್ಜಿ ವಿಲೇವಾರಿಯಾಗಿದ್ದು, 19,843 ಅರ್ಜಿ ಬಾಕಿ ಇರುವುದಾಗಿ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಸರಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿದ್ದು, 94ಸಿ ಅಡಿಯಲ್ಲಿ ಅರ್ಜಿ ಹಾಕಿರುವುದನ್ನು ಗ್ರಾಮ ಲೆಕ್ಕಿಗರು ಹಾಗೂ ಪಿಡಿಒಗಳು ಜಂಟಿಯಾಗಿ ಪರಿಶೀಲನೆ ಮಾಡಬೇಕು ಎಂದು ಸಚಿವರು ಸೂಚಿಸಿದರು. ಪ್ರಸ್ತುತ ಜಿಲ್ಲೆಯಲ್ಲಿ 77,682 ಅರ್ಜಿ 94ಸಿ ಅಡಿಯಲ್ಲಿ ಸ್ವೀಕರಿಸಲಾಗಿದೆ. 24,750 ಮಂಜೂರಾಗಿದ್ದು, 49,939 ವಿಲೇವಾರಿಯಾಗಿದೆ. 25,189 ಅರ್ಜಿಗಳು ತಿರಸ್ಕೃತವಾಗಿವೆ. 20,591 ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ಮಾಹಿತಿ ನೀಡಿದರು.

ಭೂ ಕಂದಾಯ ಕಾಯ್ದೆ 94ಎ ಹಾಗೂ ‘94ಬಿ’ಯಡಿ ಹಾಕಿರುವ ಅರ್ಜಿಗಳನ್ನು 25-30 ವರ್ಷಗಳಿಂದ ಬಾಕಿ ಇರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಪ್ರತೀ ವಾರಕ್ಕೊಮ್ಮೆ ಶಾಸಕರ ಅಧ್ಯಕ್ಷತೆಯ ಅಕ್ರಮ ಸಕ್ರಮ ಸಮಿತಿ ಸಭೆ ನಡೆಸಬೇಕು. ಈ ಬಗ್ಗೆ ಮುಂದಿನ 2 ತಿಂಗಳಲ್ಲಿ ಪ್ರಗತಿ ಸಾಧಿಸಿ ತೋರಿಸಬೇಕು ಎಂದರು. ಅಪರ ಜಿಲ್ಲಾಧಿಕಾರಿ ಕುಮಾರ್, ಎಸಿ ರೇಣುಕಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News