ಕುಡ್ಸೆಂಪ್ ಕಾಮಗಾರಿಯಲ್ಲಿ ಅವ್ಯವಹಾರ- ಲೋಕಾಯುಕ್ತಕ್ಕೆ ದೂರು: ಸಂಸದ ನಳಿನ್

Update: 2017-04-24 07:50 GMT

ಮಂಗಳೂರು, ಎ.24: ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ನೆರವಿನ ಕರ್ನಾಟಕ ನಗರ ಅಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣಾ ಯೋಜನೆಯ (ಕುಡ್ಸೆಂಪ್) ಪ್ರಥಮ ಹಂತದ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಸಂಸದ ನಳಿನ್ ಕುಮಾರ್ ಕಟೀಲು, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಸೋಮವಾರ ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಪರಿಶೀಲಿಸಿದ ಅವರು ಸುದ್ದಿಗಾರರ ಜತೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಕುಡ್ಸೆಂಪ್ ಪ್ರಥಮ ಹಂತದ ಮಂಗಳೂರು ನಗರಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದೆ. ಒಳಚರಂಡಿ ಕಾಮಗಾರಿಯನ್ನು ಪುರ್ಣಗೊಳಿಸದೇ ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಇದರಿಂದಾಗಿ ಇಡೀ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕೆಟ್ಟು ಹೋಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಹಿರಿಯ ಅಧಿಕಾರಿಗಳಾಗಿದ್ದವರೂ ಸೇರಿದಂತೆ ಅಕ್ರಮದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಬಿಜೆಪಿ ವತಿಯಿಂದ ಪಕ್ಷದ ಕಾರ್ಯಕರ್ತರೊಬ್ಬರು ಶೀಘ್ರದಲ್ಲಿ ದೂರು ಸಲ್ಲಿಸಲಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ಪತ್ತೆಹಚ್ಚಿ, ಶಿಕ್ಷೆಗೆ ಗುರಿಪಡಿಸುವಂತೆ ದೂರಿನಲ್ಲಿ ಕೋರಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News