ಲೇಡಿಗೋಶನ್ ಆಸ್ಪತ್ರೆ ಕಟ್ಟಡ ಜೂನ್ ಅಂತ್ಯಕ್ಕೆ ಸಿದ್ಧ: ನಳಿನ್

Update: 2017-04-24 08:22 GMT

ಮಂಗಳೂರು, ಎ.24: ಲೇಡಿ ಗೋಶನ್ ಸರ್ಕಾರಿ ಆಸ್ಪತ್ರೆಯ ಹೊಸ ಕಟ್ಟಡದ ಕಾಮಗಾರಿ ಜೂನ್ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು, ಜುಲೈ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ದೊರೆಯಲಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಆಸ್ಪತ್ರೆಗೆ ಭೇಟಿನೀಡಿ ಕಟ್ಟಡ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, 31 ಕೋಟಿ ರೂ. ವೆಚ್ಚದಲ್ಲಿ ಲೇಡಿಗೋಶನ್ ಆಸ್ಪತ್ರೆಯ ಕಟ್ಟಡದ ಕಾಮಗಾರಿ ಆರಂಭಿಸಲಾಗಿದೆ. 21 ಕೋಟಿ ರೂ.ಗಳನ್ನು ಎಂಆರ್‌ಪಿಎಲ್ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನೀಡಿದೆ. 10 ಕೋಟಿ ರೂ.ಗಳನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಹಿಂದಿನ ಗುತ್ತಿಗೆದಾರರಿಂದ ಸಮಸ್ಯೆಯಾಗಿ ಕಟ್ಟಡ ಕಾಮಗಾರಿ ವಿಳಂಬವಾಯಿತು. ಇದೀಗ ಗುತ್ತಿಗೆದಾರರನ್ನು ಬದಲಾಯಿಸಲಾಗಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ನಡೆದಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆರು ಮಹಡಿಗಳ ಕಟ್ಟಡದಲ್ಲಿ 600 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಅತ್ಯಾಧುನಿಕ ತೀವ್ರ ನಿಗಾ ಘಟಕದ ವ್ಯವಸ್ಥೆಯೂ ಈ ಕಟ್ಟಡದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಹೊಸ ಕಟ್ಟಡದಲ್ಲಿ ಎಲ್ಲಾ ವಸ್ತುಗಳನ್ನು ಹೊಸತಾಗಿ ಖರೀದಿ ಮಾಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಜುಲೈ ತಿಂಗಳಲ್ಲಿ ಹೊಸ ಕಟ್ಟಡದ ಉದ್ಘಾಟನೆ ನಡೆಯಲಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರನ್ನು ಕಟ್ಟಡ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಚ್.ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ರಾವ್, ಲೇಡಿಗೋಶನ್ ಆಸ್ಪತ್ರೆ ಅಧೀಕ್ಷಕಿ ಡಾ.ಸವಿತಾ ಪರಿಶೀಲನೆ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News