ನಿಟ್ಟೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

Update: 2017-04-24 08:35 GMT

ಮಂಗಳೂರು, ಎ.24: ಚಲನಚಿತ್ರೋತ್ಸವಗಳ ಮೂಲಕ ಕಲಾತ್ಮಕ ಸಿನೆಮಾಗಳಿಗೆ ಉತ್ತೇಜನ ದೊರೆಯುವಂತಾಗಿದೆ ಹಾಗೂ ಹೆಚ್ಚಿನ ಪ್ರೇಕ್ಷಕರು ಆ ಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮರಾಠಿ ಚಿತ್ರ ನಿರ್ದೇಶಕ ಸುನಿಲ್ ಸುಕ್ತಾನ್‌ಕರ್ ಅಭಿಪ್ರಾಯಿಸಿದ್ದಾರೆ.

ಅವರು ಇಂದು ನಗರದ ಭಾರತ್ ಮಾಲ್‌ನ ಭಾರತ್ ಸಿನೆಮಾಸ್ ಚಿತ್ರಮಂದಿರದಲ್ಲಿ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾಗಿರುವ ನಾಲ್ಕು ದಿನಗಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಕ್ಲಾಪ್ ಬೋಡ್’ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು.

ಭಾರತೀಯ ಸಿನೆಮಾಗಳು ವಿಶ್ವದೆಲ್ಲೆಡೆ ಪ್ರದರ್ಶಿಸಲ್ಪಟ್ಟು ಮೆಚ್ಚುಗೆಯನ್ನು ಪಡೆಯುತ್ತಿವೆ. ಇಂದು ಮನರಂಜನಾ ಚಿತ್ರಗಳಿಗೆ ಸರಿಸಾಟಿಯಾಗಿ ಕಲಾತ್ಮಕ ಚಿತ್ರಗಳೂ ಸಂಶೋಧನಾತ್ಮಕವಾಗಿ ನಿರ್ದೇಶಿಸಲ್ಪಡುತ್ತಿವೆ ಎಂದವರು ತಿಳಿಸಿದರು. ಕ್ಲಾಪ್ ಬಾಯ್ ಆಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿರುವ ತಾನು ಇಂದು ನಿರ್ದೇಶಕನಾಗಿ ಬೆಳೆದಿದ್ದರೂ ಕ್ಲಾಪ್ ಬೋರ್ಡ್ ತನಗೆ ಇಂದಿಗೂ ಕುತೂಹಲಕಾರಿಯಾಗಿಯೇ ಉಳಿದಿದೆ ಎಂದು ಅವರು ಹೇಳಿದರು.

ಬಾಲಿವುಡ್‌ಗೆ ಮಂಗಳೂರು ಕೊಡುಗೆ ಅಪಾರವಿದೆ. ಐಶ್ವರ್ಯಾ ರೈ, ಸುನೀಲ್ ಶೆಟ್ಟಿ, ರೋಹಿತ್ ಶೆಟ್ಟಿ, ದೀಪಿಕಾ ಪಡುಕೋಣೆ ಮೊದಲಾದ ಹಲವಾರು ಖ್ಯಾತ ನಟರನ್ನು ಮಂಗಳೂರು ಬಾಲಿವುಡ್‌ಗೆ ನೀಡಿದೆ. ಒಟ್ಟಿನಲ್ಲಿ ಚಿತ್ರರಂಗಕ್ಕೂ ಮಂಗಳೂರಿಗೂ ಉತ್ತಮವಾದ ನಂಟಿದೆ ಎಂದು ನಿಟ್ಟೆ ವಿವಿಯ ಪ್ರೊ ಚಾನ್ಸಲರ್ ಡಾ.ಎಂ. ಶಾಂತಾರಾಮ್ ಶೆಟ್ಟಿ ಅಭಿಪ್ರಾಯಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಚಿತ್ರ ನಿರ್ಮಾಪಕರು, ವಿಮರ್ಶಕರಾದ ಮನು ಚಕ್ರವತಿ, ಸಿ.ಎನ್. ರಾಮಚಂದ್ರ, ಭಿಜಯ ಜನ, ಗಿರಿದೇವ್ ಹಸನ್, ಸಜಿನ್ ಬಾಬು ಮೊದಲಾದವರು ಭಾಗವಹಿಸಿದ್ದರು. ಚಲನಚಿತ್ರೋತ್ಸವದ ಸಂಯೋಜಕ ರವಿರಾಜ್ ಕಿಣಿ ಉಪಸ್ಥಿತರಿದ್ದರು.

ವಿಲ್ಮಾ ಸೆರಾವೊ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ ವೀಕ್ಷಣೆಗೆ ಪ್ರವೇಶ ಉಚಿತ

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳು ಪ್ರದರ್ಶನದಲ್ಲಿ ತೆರೆಕಾಣಲಿದ್ದು, ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರುತ್ತದೆ. ನಾಲ್ಕು ದಿನಗಳಲ್ಲಿ ಒಟ್ಟು 55 ಚಿತ್ರಗಳು ಪದರ್ಶಿಸಲ್ಪಡಲಿವೆ. ಹಿಂದಿ, ತುಳು, ಬೆಂಗಾಲಿ, ಕನ್ನಡ, ಗುಜರಾತಿ, ಮಳಯಾಲಂ.. ಹೀಗೆ ವಿವಿಧ ಭಾಷೆಗಳ ಚಿತ್ರಗಳು ಪ್ರದರ್ಶಿಸಲ್ಪಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News